ಸಾರಾಂಶ
ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಕಲಬುರಗಿ ವಿಭಾಗಮಟ್ಟದ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ಕುಕನೂರು
ಭಾರತ ದೇಶದ ೧೪೦ ಕೋಟಿ ಜನಸಂಖ್ಯೆಯಲ್ಲಿ ಯುವ ಸಮುದಾಯ ಹೆಚ್ಚಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಯುವಕರು ಇನ್ನಷ್ಟು ಬಲಿಷ್ಠರಾಗಬೇಕಾಗಿದೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಹೇಳಿದರು.ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಕಲಬುರಗಿ ವಿಭಾಗಮಟ್ಟದ ಪ್ರಾಥಮಿಕ, ಪ್ರೌಢ ಶಾಲೆಗಳ ವಾಲಿಬಾಲ್ ಹಾಗೂ ಖೋ ಖೋ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಎಂಬುದು ತಪಸ್ಸು ಇದ್ದಂತೆ. ಸತತ ಪ್ರಯತ್ನದಿಂದ ಅದು ಒಲಿಯುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಕ್ರೀಡೆಯಿಂದ ಸದೃಢ ದೇಹ, ಸದೃಢ ಮನಸ್ಸು ಪ್ರಾಪ್ತವಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬಳ್ಳಾರಿ, ಬೀದರ್, ಯಾದಗಿರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು.ತಹಸೀಲ್ದಾರ್ ಎಚ್.ಪ್ರಾಣೇಶ, ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ವಿದ್ಯಾಶ್ರೀ ಶಿಕ್ಷಣ ಸಂಸ್ಥೇಯ ಅಧ್ಯಕ್ಷ ಜಸವಂತರಾಜ್ ಜೈನ್, ಬಿಇಒ ಸೋಮಶೇಖರಗೌಡ್ರ, ಎ.ಬಸವರಾಜ, ವೀರಯ್ಯ ಉಳ್ಳಾಗಡ್ಡಿ, ಶರಣಪ್ಪ ಅರಕೇರಿ, ಅಶೋಕಗೌಡ, ಎಸ್.ವಿ. ಧರಣಾ, ಅಶೋಕ ಮಾಲೀಪಾಟೀಲ್, ಫೀರಸಾಬ್ ದಫೇದಾರ್, ಸಿದ್ದಲಿಂಗಯ್ಯ ಶ್ಯಾಗೋಟಿ, ರಾಜಶೇಖರ ಹಿರೇಮಠ, ಮಧುಸೂಧನ್ ದೇಸಾಯಿ, ಶರಣಪ್ಪ ಮುದ್ಲಾಪೂರ, ಬಸವರಾಜ ಉಳ್ಳಾಗಡ್ಡಿ, ಬಸವರಾಜ ಅಂಗಡಿ, ಶರಣಪ್ಪ ವೀರಾಪೂರ ಇತರರಿದ್ದರು. ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ:
ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಕೊಪ್ಪಳ ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರ ತಂಡಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಯಾದಗಿರಿ ಗಾಜರಕೋಟ ಕೆಪಿಎಸ್ ಶಾಲೆಯ ವಿರುದ್ಧ ಕೊಪ್ಪಳ ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 18-25,16-25 ಅಂಕಗಳ ಮೂಲಕ ಜಯ ಸಾಧಿಸಿದ್ದಾರೆ. ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಯಾದಗಿರಿ ಸರ್ಕಾರಿ ಪ್ರೌಢಶಾಲೆಯ ವಿರುದ್ಧವೂ ಕೊಪ್ಪಳ ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ತಂಡವೂ 20-25,18-25 ಅಂಕಗಳ ಮೂಲಕ ಜಯ ಸಾಧಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತರಬೇತಿದಾರರಾದ ಸುರೇಶ ಮತ್ತು ಕಮಲ್ ಹಾಗೂ ಶಾಲೆಯ ದೈಹಿಕ ಶಿಕ್ಷಕ ಶಿವಾನಂದ ಗಾಢದಿನ್ನಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜಯ ಸಾಧಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಸೋಮರಡ್ಡಿ ಡಂಬ್ರಹಳ್ಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ನಗರಸಭೆ ಸದಸ್ಯರು ಶ್ಲಾಘಿಸಿದ್ದಾರೆ.ಪ್ರಾಥಮಿಕ ಶಾಲಾ ವಿಭಾಗದಲ್ಲಿಯೂ ಕೊಪ್ಪಳ ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ ಸಾಧಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿಜಯನಗರ ಜಿಲ್ಲೆಯ ತೆಲುಗಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿರುದ್ಧ ವಿಭಾಗಮಟ್ಟದಲ್ಲಿ ಜಯ ಸಾಧಿಸಿದ್ದಾರೆ.