ಇಂದಿನ ವಿದ್ಯಾರ್ಥಿಗಳು, ಯುವ ಜನಾಂಗ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗಪ್ಪ ಜಂಬಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್ಇಂದಿನ ವಿದ್ಯಾರ್ಥಿಗಳು, ಯುವ ಜನಾಂಗ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗಪ್ಪ ಜಂಬಗಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ಬೀದರ್ ಸಹಯೋಗದಲ್ಲಿ‌ ಬೀದರ್‌ನ ಹಿರಿಯ ಸಾಹಿತಿ ಎಸ್.‌ಬಿ.ಕುಚಬಾಳ ಅವರ ನಿಲಯದಲ್ಲಿ ಸೋಮವಾರ ಆಯೋಜಿಸಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪುಸ್ತಕಗಳು ಸಹಕಾರಿಯಾಗಿವೆ ಎಂದರು.ಕಳೆದ 3-4 ದಶಕಗಳ ಹಿಂದೆ ದೊಡ್ಡಾಟ, ಸಣ್ಣಾಟ, ರಾಮಾಯಣ, ಮಹಾಭಾರತ ಗ್ರಂಥಗಳು ಸಮಾಜದಲ್ಲಿ ಸಾಂಸ್ಕೃತಿಕ, ಬೌದ್ಧಿಕ ವಾತಾವರಣ ಬೆಳವಣಿಗೆಗೆ ಸಹಕಾರಿಯಾಗಿದ್ದವು. ಇಂದಿನ ಮೊಬೈಲ್‌ ಬಳಕೆಯ ಜಗತ್ತಿನಲ್ಲಿಯೂ ಪುಸ್ತಕ ಓದುವುದನ್ನು ಬಿಡಬಾರದು. ಲೇಖಕರ ಪುಸ್ತಕ ಪ್ರಕಟಣೆಗೆ ಸರ್ಕಾರ ಆರ್ಥಿಕ ನೆರವು ಒದಗಿಸಿದರೆ ಓದುಗರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುತ್ತದೆ ಎಂದರು. ಸಾಹಿತಿ ಶೈಲಜಾ ಹುಡಗೆ ವಿಶೇಷ ಉಪನ್ಯಾಸ ನೀಡಿದರು.ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಪ್ರಾಸ್ತಾವಿಕ ಮಾತನಾಡಿ, ಲೋಕದ ಪ್ರಜ್ಞೆ ಅರಿತುಕೊಳ್ಳಬೇಕಾದರೆ ಪುಸ್ತಕ ಓದು ಅಗತ್ಯವಾಗಿದೆ. ಪ್ರತಿ ಮನೆಯೂ ಜ್ಞಾನದ ಕೇಂದ್ರವಾಗಬೇಕಾದರೆ ಗ್ರಂಥಾಲಯಕ್ಕೆ ಜಾಗ ಮೀಸಲಿಡಬೇಕು ಎಂದರು.ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, ಮೊಬೈಲ್‌ ಹಾಗೂ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಕುಸಿಯುತ್ತಿದೆ. ಲೇಖಕರ ಪುಸ್ತಕ ಪ್ರಕಟಣೆಗೆ ಕೇಂದ್ರ ಹಾಗೂ ಸರ್ಕಾರಗಳು ಸಹಾಯಧನ ಒದಗಿಸುತ್ತಿದ್ದು, ಇದರ ಸದುಪಯೋಗಪಡೆದುಕೊಳ್ಳಬೇಕು. ಪ್ರತಿ ಮನೆಗಳಲ್ಲಿ ಪೋಷಕರು ಮಕ್ಕಳ ಕೈಗೆ ಪುಸ್ತಕ ಕೊಡಬೇಕು ಎಂದರು.ಹಿರಿಯ ಸಾಹಿತಿ ಎಸ್.‌ಬಿ.ಕುಚಬಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಸ್.‌ಬಿ. ಕುಚಬಾಳ ಅವರ ಮನೆಯಲ್ಲಿ ಸ್ಥಾಪಿಸಿದ ʼಭೀಮ ರತ್ನ " ನೂತನ ಗ್ರಂಥಾಲಯ ಕೋಣೆಯನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ಪ್ರಾಧ್ಯಾಪಕ ರಾಜಕುಮಾರ ಸಿಂಧೆ, ಲಕ್ಷ್ಮಣ ಮೇತ್ರೆ ಸಾಹಿತ್ಯಾಸಕ್ತರಾದ ಗುಂಡಪ್ಪಾ ಹುಡಗೆ, ದೇವೇಂದ್ರ ಡಿಗ್ಗೆ, ಎಂ.ಡಿ.ರಶೀದ್‌, ಭಿಕ್ಕುಮಿಯ್ಯಾ, ದೇವೆಂದ್ರ ಅಣಕಲೆ, ಲಕ್ಷ್ಮಣ ಚಿಟ್ಟಾ, ನರಸಿಂಗ್‌, ಪ್ರಭಾಕರ ಸೋನೆ, ಈಶ್ವರ ಸೇರಿದಂತೆ ಬಡಾವಣೆ ನಿವಾಸಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.