ಸಾರಾಂಶ
ಅತ್ಯಂತ ಸರಳವಾಗಿ ಮಂತ್ರೋಪದೇಶ ಮಾಡಿ ಶ್ರೀಮೂಲ ರಾಮ ಹಾಗೂ ಪಂಚಮುಖಿ ಆಂಜನೇಯನ ಮಹಿಮೆಯನ್ನು ನಾಡಿನ ಜನತೆಗೆ ತಿಳಿಸಿಕೊಟ್ಟ ಗುರುರಾಯರು, ಕರುಣಾಮಯಿ ಮಾತ್ರವಲ್ಲದೇ ನೊಂದ ಜನರ ಜೀವನಚೈತನ್ಯವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯಾವಂತ ಯುವಜನರು, ಗುರು- ಹಿರಿಯರು ಹಾಗೂ ತಂದೆ- ತಾಯಿಯರನ್ನು ಗೌರವಿಸಿ, ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ದೇವರೂರಿನ ಮಾನವ ಧರ್ಮಪೀಠಾಧಿಪತಿ ಡಾ.ಮಾದೇಶ್ ಗುರೂಜಿ ಕರೆ ನೀಡಿದರು.ತಾಲೂಕಿನ ಬೆಡದಹಳ್ಳಿ ಶ್ರೀಪಂಚಭೂತೇಶ್ವರ ಕ್ಷೇತ್ರದಲ್ಲಿ ಗುರು ರಾಘವೇಂದ್ರ ಸಾರ್ವಭೌಮ ಯತಿಗಳ 335ನೇ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಗುರುರಾಯರ ಮೂರ್ತಿಗೆ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಗುರುರಾಯ ಹೋಮ ನಡೆಸಿ ಲೋಕಕಲ್ಯಾರ್ಥವಾಗಿ ಪ್ರಾರ್ಥಿಸಿ, ಆಶೀರ್ವಚನ ನೀಡಿದರು.
ಗುರುರಾಘವೇಂದ್ರ ಸಾರ್ವಭೌಮ ಯತಿಗಳು ಲೋಕಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ನೊಂದವರು ಹಾಗೂ ಅನಾಥರ ಬಾಳಿನ ಬೆಳಕಾದರು. ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ನಿಜವಾದ ಭಕ್ತಿ ಹಾಗೂ ಪೂಜೆಗೆ ಭಗವಂತನು ಒಲಿದು ಹರಸಿ ಆಶೀರ್ವದಿಸುತ್ತಾನೆ ಎಂಬ ಸತ್ಯ ಸಂದೇಶ ನೀಡಿದ್ದಾಗಿ ತಿಳಿಸಿದರು.ಗುರುರಾಯರು ಮಂತ್ರಾಲಯದ ಬೃಂದಾವನದಲ್ಲಿ ಜೀವಂತವಾಗಿ ಐಕ್ಯರಾಗಿ ಬೇಡಿ ಬಂದ ಭಕ್ತರನ್ನು ಹರಸಿ, ಆಶೀರ್ವದಿಸುತ್ತಾ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಅತ್ಯಂತ ಸರಳವಾಗಿ ಮಂತ್ರೋಪದೇಶ ಮಾಡಿ ಶ್ರೀಮೂಲ ರಾಮ ಹಾಗೂ ಪಂಚಮುಖಿ ಆಂಜನೇಯನ ಮಹಿಮೆಯನ್ನು ನಾಡಿನ ಜನತೆಗೆ ತಿಳಿಸಿಕೊಟ್ಟ ಗುರುರಾಯರು, ಕರುಣಾಮಯಿ ಮಾತ್ರವಲ್ಲದೇ ನೊಂದ ಜನರ ಜೀವನಚೈತನ್ಯವಾಗಿದ್ದಾರೆ ಎಂದು ಹೇಳಿದರು.
ಬೆಡದಹಳ್ಳಿಯ ಪಂಚಭೂತೇಶ್ವರ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಮಳವಳ್ಳಿ ಬೋಸೇಗೌಡನ ದೊಡ್ಡಿಯ ಶ್ರೀ ಸಿದ್ಧರಾಮೇಶ್ವರ ಪೀಠದ ಶ್ರೀ ಸಿದ್ಧರಾಮ ಶ್ರೀಗಳು ಧಾರ್ಮಿಕ ಸಂದೇಶ ನೀಡಿದರು. ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕಿಕ್ಕೇರಿ ಪೊಲೀಸ್ ಠಾಣೆ ಸಿಪಿಐ ರೇವತಿ, ಪೀಠದ ಕಾರ್ಯದರ್ಶಿ ಕಾಂತರಾಜು, ಸಂಚಾಲಕ ಡಾ.ಕೆ.ಎಸ್.ಚಂದ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ ಮತ್ತಿತರರು ಭಾಗವಹಿಸಿದ್ದರು.