ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯುವಜನತೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಚಟಗಳನ್ನಲ್ಲ. ತಾತ್ಕಾಲಿಕ ಸಂತೋಷಕ್ಕಿಂತ ಶಾಶ್ವತ ಸಂತೋಷವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿ.ಎ.ಮಂಜುನಾಥ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ವಿವಿದ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರೌಢಾವಸ್ಥೆಯಲ್ಲಿ ಯುವಜನತೆ ಕೆಲವು ಆಕರ್ಷಣೆಗಳಿಗೆ ಒಳಗಾಗಿ ಅಥವಾ ಮತ್ಯಾವುದೋ ಒತ್ತಡಕ್ಕೆ ಮಣಿದು ದುಶ್ಚಟಗಳಿಗೆ ಬೀಳುವ ಸಾಧ್ಯತೆ ಇರುತ್ತದೆ. ಆದರೆ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ಉತ್ತಮ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು ಈ ರೀತಿಯ ಉತ್ತಮ ಹವ್ಯಾಸಗಳನ್ನು ತಮ್ಮದಾಗಿಸಿಕೊಳ್ಳಬೇಕು. ಎಷ್ಟೋ ಜನರು ದುಶ್ಚಟಗಳಿಗೆ ಬಲಿಯಾಗಿ ತೀವ್ರವಾಗಿ ಹಾಳಾಗಿರುವುದನ್ನು ಕಂಡಿದ್ದೇವೆ. ಆದ್ದರಿಂದ ದುಶ್ಚಟಗಳಿಂದ ದೂರ ಇರಬೇಕು ಎಂದರು.
ಸಿನಿಮಾ ಮೊದಲಿಗೆ ಬರುವ ಜಾಹಿರಾತನ್ನು ನೋಡಬೇಕು. ಚಟದಿಂದಾಗುವ ಪರಿಣಾಮವನ್ನು ಪ್ರತಿ ಚಲನಚಿತ್ರದ ಮೊದಲಿಗೆ ತೋರಿಸಲಾಗುತ್ತದೆ ಎಂದ ಅವರು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಯುವ ಪೀಳಿಗೆಗೆ ಪರಿಣಾಮಕಾರಿಯಾಗಿ ಅರಿವನ್ನು ಮೂಡಿಸಬೇಕಿದೆ ಎಂದು ಹೇಳಿದರು.ಡಿಎಚ್‌ಒ ಡಾ.ಕೆ.ಎಸ್.ನಟರಾಜ್ ಮಾತನಾಡಿ, ತಂಬಾಕು ಸೇವನೆ ಅತ್ಯಂತ ಮಾರಕವಾಗಿದ್ದು, ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಧೂಮಸಹಿತ ತಂಬಾಕು ವಸ್ತುಗಳಲ್ಲಿ 7000 ರಾಸಾಯನಿಕ ವಸ್ತುಗಳಿದ್ದು ಇದರಲ್ಲಿ 69 ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಾಗಿವೆ ಎಂದು ಹೇಳಿದರು.
ಪ್ರತಿ ವರ್ಷ ವಿಶ್ವವಿದ್ಯಾದಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆ ಕಾರಣದಿಂದ ಮರಣ ಹೊಂದುತ್ತಿದ್ದಾರೆ. ಪ್ರತಿ 6 ಸೆಕೆಂಡಿಗೆ ಒಂದು ಸಾವು ಸಂಭವಿಸುತ್ತಿದೆ. ಆದ್ದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ತಂಬಾಕು ಸೇವನೆ ಅತ್ಯಂತ ಮಾರಕವಾಗಿದೆ. ಕೋಟ್ಪಾ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಮಾರಾಟ ಮಾಡುವುದು, ಅವರಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದು ಶಿಕ್ಷಾರ್ಹ ಅಪರಾಧ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಂಬಾಕು ಉತ್ಪನ್ನದ ನಾಮಫಲಕವನ್ನು ಕಡ್ಡಾಯವಾಗಿ ಸಂಸ್ಥೆಯ ಮುಂದೆ ಪ್ರದರ್ಶನ ಮಾಡಬೇಕು. ಶಿಕ್ಷಣ ಸಂಸ್ಥೆ ಸುತ್ತಮುತ್ತ ತಂಬಾಕು ಮಾರಾಟ ಮಾಡುವುದು ಕಂಡು ಬಂದಲ್ಲಿ ಪಬ್ಲಿಕ್ ಐ 8277982900 ತಿಳಿಸಬಹುದು ಅಥವಾ 1098ಗೆ ಕರೆ ಮಾಡಿ ತಿಳಿಸಬಹುದು ಎಂದರು.
ಈ ಬಾರಿ ‘ಆಕರ್ಷಣೆಯ ಮುಖವಾಡವನ್ನು ಕಳಚುವುದು-ನಿಕೋಟಿನ್, ತಂಬಾಕು ವ್ಯಸನವನ್ನು ಎದುರಿಸುವುದು’ ಎಂಬ ವಿಶೇಷ ಘೋಷವಾಕ್ಯದೊಂದಿಗೆ ಈ ಜಾಥಾ ಕಾರ್ಯಕ್ರಮ ನಡೆಯಿತು.ಜಾಥಾದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಎಂ.ಗೀತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್.ನಾಗರಾಜ್ ನಾಯ್ಕ್, ಬಾಯಿಯ ಆರೋಗ್ಯದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಮೋಹನ್, ಟಿಎಚ್‌ಒ ಡಾ.ಚಂದ್ರಶೇಖರ್, ಡಾ.ರವೀಶ್, ಡಾ.ಸತೀಶ್ ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವಿವಿಧ ಇಲಾಖಾ ಮುಖ್ಯಸ್ಥರು, ಸಿಬ್ಬಂದಿ, ಸಿಮ್ಸ್ ಮತ್ತು ಸುಬ್ಬಯ್ಯ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿದ್ದರು.