ಯುವಕರು ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

| Published : Sep 30 2025, 12:00 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೆ ಟೆನ್ನಿಸ್‌ನಂತ ಸೇರಿದಂತೆ ತಮ್ಮಗಿಷ್ಟವಾದ ಯಾವುದೇ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿತರಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಪ್ರಸ್ತುತ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೆ ಟೆನ್ನಿಸ್‌ನಂತ ಸೇರಿದಂತೆ ತಮ್ಮಗಿಷ್ಟವಾದ ಯಾವುದೇ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿತರಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಕರೆ ನೀಡಿದರು.ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನವೀಕೃತ ಟೆನ್ನಿಸ್ ಕ್ರೀಡಾಂಗಣದಲ್ಲಿ ತುಮಕೂರು ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟೆನ್ನಿಸ್‌ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಮಕ್ಕಳನ್ನು ಟೆನ್ನಿಸ್ ಆಟ ಆಡುವಂತೆ ಪೋಷಕರು ಉತ್ತೇಜಿಸಿ ತರಬೇತಿ ಕೊಡಿಸುವ ಮೂಲಕ ತಯಾರು ಮಾಡಬೇಕು. ಯುವಕರು ಮಾದಕ ವ್ಯಸನಗಳಿಗೆ ಮಾರು ಹೋಗದೆ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಈಗಾಗಲೇ ಪೊಲೀಸ್ ಇಲಾಖೆ ಯುವಕರು ಮಾದಕ ವಸ್ತುಗಳಿಂದ ದೂರ ಇರುವಂತೆ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಪ್ಪು ಮಾರ್ಗದಲ್ಲಿ ಸಾಗದಂತೆ, ವಿಶೇಷವಾಗಿ ಮಾದಕ ವಸ್ತುಗಳ ವ್ಯಸನ ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಪರ್ಯಾಯವಾಗಿ ಮಕ್ಕಳನ್ನು ಕ್ರೀಡೆಗಳತ್ತ ಆಕರ್ಷಿಸಲು ಇಂತಹ ಕ್ರೀಡಾಕೂಟಗಳ ಅಗತ್ಯವಿದೆ ಎಂದು ಅವರು ಹೇಳಿದರು. ನವೀಕೃತಗೊಂಡಿರುವ ಈ ಟೆನ್ನಿಸ್ ಕೋರ್ಟ್ ಅತ್ಯದ್ಭುತವಾಗಿ ಮೂಡಿ ಬಂದಿದೆ. ಈ ಕೋರ್ಟ್‌ನ ಹಾಗೆಯೇ ಕಾಪಾಡಿಕೊಂಡು ಮಕ್ಕಳು, ಯುವಕರು ಟೆನ್ನಿಸ್ ಆಟ ಆಡಲು ಉತ್ತೇಜನ ನೀಡಬೇಕು. ಇದಕ್ಕೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಹೊರಗಡೆಗೆ 2 ಟೆನ್ನಿಸ್ ಕೋರ್ಟ್ ಮಾಡಲು ಪ್ರಯತ್ನಿಸುತ್ತೇನೆ. ನಂತರ ನ್ಯಾಷನಲ್ ಟೂರ್ನಿಮೆಂಟ್ ಹಾಗೂ ಇಂಟರ್ ನ್ಯಾಷನಲ್ ಟೂರ್ನಿಮೆಂಟ್ ಸಹ ಆಯೋಜಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದ ಅವರು, ಒಳಾಂಗಣ ಕ್ರೀಡಾಂಗಣ ಮಾಡಲು ಸಹ ಚಿಂತನೆ ನಡೆಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಯುವ ಆಟಗಾರರನ್ನು ಉತ್ತೇಜಿಸಲು ಮತ್ತು ಸಾಧನೆಯನ್ನು ಗುರುತಿಸುವ ಸಲುವಾಗಿ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ 50 ಸಾವಿರ ಮೌಲ್ಯದ ಟ್ರೋಫಿಗಳು, ಪ್ರಮಾಣ ಪತ್ರಗಳು ಮತ್ತು ನಗದು ಬಹುಮಾನ ವಿತರಿಸಲಾಯಿತು. ಈ ಕ್ರೀಡಾಕೂ ಟದಲ್ಲಿ 10 ಜಿಲ್ಲೆಗಳ ಪ್ರತಿನಿಧಿಸುವ 170 ಆಟಗಾರರು ಭಾಗವಹಿಸಿದ್ದರು. ಅಂಡರ್-12 ಮತ್ತು ಅಂಡರ್-14 ವಿಭಾಗಗಳಲ್ಲಿ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ದಾವಣಗೆರೆ, ಧಾರವಾಡ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಿಂದ ಆಟಗಾರರು ಪಾಲ್ಗೊಂಡಿದ್ದರು,. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಬಿಎಂಟಿಸಿ ನಿಗಮದ ಅಧ್ಯಕ್ಷ ನಿಕೇತ್‌ರಾಜ್ ಮೌರ್ಯ, ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಅಮರನಾಥ್, ಕಾರ್ಯದರ್ಶಿ ರಾಜೇಶ್ ಹಿರೇಮಠ, ರಾಜಶೇಖರ್, ಟೂರ್ನಿಮೆಂಟ್ ನಿರ್ದೇಶಕ ಟಿ.ಎನ್. ಶ್ರೀಕಂಠಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯ ಡಿ. ರಾಜಶೇಖರ್, ಮುಖ್ಯ ಅಂಪೈರ್ ಹೇಮಂತ್ ಕಟ್ಟೆ, ಸಮಿತಿ ಸದಸ್ಯರಾದ ಅರುಣ, ಪ್ರಣವ್, ಶ್ರವಣ್, ಅಮೋಘ್ ಮತ್ತಿತರರು ಉಪಸ್ಥಿತರಿದ್ದರು.