ಯುವಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು: ಎನ್‌.ಎಂ.ಕಾಂತರಾಜ್ ಕರೆ

| Published : May 20 2025, 01:01 AM IST

ಯುವಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು: ಎನ್‌.ಎಂ.ಕಾಂತರಾಜ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಯುವಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶೆಟ್ಟಿಕೊಪ್ಪ ಸ್ಪೋರ್ಟ್ಸ್ ಕ್ಲಬ್‌ನ ಗೌರವ ಸಂಚಾಲಕ ಎನ್.ಎಂ.ಕಾಂತರಾಜ್ ಸಲಹೆ ನೀಡಿದರು.

ಶೆಟ್ಟಿಕೊಪ್ಪದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾ‍ವಳಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಯುವಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶೆಟ್ಟಿಕೊಪ್ಪ ಸ್ಪೋರ್ಟ್ಸ್ ಕ್ಲಬ್‌ನ ಗೌರವ ಸಂಚಾಲಕ ಎನ್.ಎಂ.ಕಾಂತರಾಜ್ ಸಲಹೆ ನೀಡಿದರು.ಶನಿವಾರ ರಾತ್ರಿ ಶೆಟ್ಟಿಕೊಪ್ಪದ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ನಡೆದ ಶೃಂಗೇರಿ ಕ್ಷೇತ್ರಮಟ್ಟದ ಹೊನಲು- ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳಲ್ಲಿ ಸ್ಥಳೀಯರ ಜನರ ಬದುಕು, ಭಾವನೆಗಳು ಅಡಗಿವೆ. ಅವುಗಳನ್ನ ಗೌರವಿಸಿ, ಉಳಿಸಿ ಬೆಳೆಸಬೇಕಾಗಿರುವುದು ಕ್ರೀಡಾ ಪಟುಗಳ ಕರ್ತವ್ಯ. ಇಂದು ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳಿಗೆ ಶರಣಾದ ಯುವಜನತೆ ನಮ್ಮ ಭಾರತೀಯ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಶೆಟ್ಟಿ ಕೊಪ್ಪ ಹಿಂದಿನಿಂದಲೂ ಕ್ರೀಡೆಗಳಿಗೆ ಹೆಸರುವಾಸಿಯಾಗಿತ್ತು. ಈಗ ಗ್ರಾಮೀಣ ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿ, ಕೆಸರು ಗದ್ದೆ ಓಟ, ಕೋ ಕೋ ಗಳಿಂದ ದೂರವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ. ಮಂಜುನಾಥ್ ಮಾತನಾಡಿ, ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಯುವ ಶಕ್ತಿ ಸದ್ಬಳಕೆ ಆಗಬೇಕು. ಯುವಕರು ಅನವಶ್ಯಕವಾಗಿ ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶಕರಾಗಿರಬೇಕು ಎಂದರು. ಗ್ರಾಪಂ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ವಾಲಬಾಲ್ ಮನುಷ್ಯನ ಪ್ರತಿಯೊಂದು ಅಂಗಾಂಗವನ್ನು ನಿಯಂತ್ರಣ ದಲ್ಲಿಡುತ್ತದೆ. ಯೋಚನೆ, ಗುರಿ, ದೃಷ್ಟಿ ಎಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ. ಶರೀರಕ್ಕೆ ಉತ್ತಮ ವ್ಯಾಯಾಮ ಸಿಗಲಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಸದಾ ಉಲ್ಲಾಸದಿಂದ ಕೂಡಿರುವುದಲ್ಲದೆ ಸದಾ ಚಟುವಟಿಕೆಯಿಂದ ಇರಲು ಸಾಧ್ಯ ಎಂದರು. ಸ್ಪೋರ್ಟ್ಸ ಕ್ಲಬ್ ಸಂಚಾಲಕ ನಿದರ್ಶನ್ ಮಾತನಾಡಿ, ಕೆಲ ಆಸಕ್ತ ಯುವಕರ ತಂಡ ಕಟ್ಟಿ ಮೊದಲಿಗೆ ವಾಲಿಬಾಲ್ ಆಟ ಪ್ರಾರಂಭಿಸಿದ್ದೇವೆ. ಈ ಕ್ರೀಡೆಗೆ ಊರಿನ ಅನೇಕ ಕ್ರೀಡಾಸಕ್ತರು, ಕ್ರೀಡಾ ಅಭಿಮಾನಿಗಳು ಕೈಜೋಡಿಸಿ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ ಕ್ರೀಡಾ ಪರಿಕರಗಳನ್ನು ನೀಡಿದ್ದಾರೆ ಎಂದರು. ಪಂದ್ಯಾವಳಿಯಲ್ಲಿ 15 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಸಿಂಸೆ ವಾರಿಯರ್ಸ ತಂಡ ಪಡೆಯಿತು. ದ್ವಿತೀಯ ಬಹುಮಾನ ಸಿಂಹನಗದ್ದೆ ತಂಡ ಪಡೆಯಿತು. ತೃತೀಯ ಬಹುಮಾನ ಯುನೈಟೆಡ್ ಫ್ರೆಂಡ್ಸ್ ತಂಡ ಪಡೆಯಿತು. ನಾಲ್ಕನೇ ಸ್ಥಾನವನ್ನು ಕ್ರಮವಾಗಿ ಶೆಟ್ಟಿಕೊಪ್ಪ ಎ ತಂಡ ಹಾಗೂ ಸಿಂಹನಗದ್ದೆ ಬಿ ತಂಡ ಪಡೆದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲಿಬಾಲ್ ಕ್ರೀಡಾಪಟು ಬಿ.ಎಲ್.ನಿಶಾಂತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್.ಆರ್. ಪುರದ ವಿ.ಎಸ್.ಎಸ್.ಎನ್. ಉಪಾಧ್ಯಕ್ಷ ಅಜಂತ, ಹಿರಿಯ ಕ್ರೀಡಾಪಟು ಬಾಳೆಮನೆ ಅಜಂತ, ಬರ್ಕ್ ಮನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಎಲ್ಲೋ, ಕರುಗುಂದ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಸಾಜು ಉಪಸ್ಥಿತರಿದ್ದರು.

18 ಎನ್.ಆರ್.ಪಿ. 1

ಎನ್.ಆರ್.ಪುರ ತಾಲೂಕು ಶೆಟ್ಟಿಕೊಪ್ಪದಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಎನ್.ಎಂ.ಕಾಂತರಾಜ್ ಉದ್ಘಾಟಿಸಿದರು. ಎ.ಬಿ.ಮಂಜುನಾಥ್,ವಾಣಿನರೇಂದ್ರ, ನಿದರ್ಶನ್,ಬಿ.ಎಲ್.ನಿಶಾಂತ್, ಅಜಂತ, ಎಲ್ದೋ, ಸಾಜು ಇದ್ದರು.