ಯುವಜನತೆ ದೇಶಾಭಿಮಾನ ಬೆಳಸಿಕೊಂಡು ಅಭಿವೃದ್ಧಿಗೆ ಶ್ರಮಿಸಿ: ಉಪ ತಹಸೀಲ್ದಾರ್ ವಿನಯ್

| Published : Aug 12 2024, 01:00 AM IST

ಯುವಜನತೆ ದೇಶಾಭಿಮಾನ ಬೆಳಸಿಕೊಂಡು ಅಭಿವೃದ್ಧಿಗೆ ಶ್ರಮಿಸಿ: ಉಪ ತಹಸೀಲ್ದಾರ್ ವಿನಯ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಹೋರಾಟಕ್ಕೆ ಶಿಕಾರಿಪುರ ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಕೊಡುಗೆ ಎಂಬ ವಿಷಯದ ಬಗ್ಗೆ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಯುವ ಸಮುದಾಯ ದೇಶದ ಆಸ್ತಿಯಾಗಿದ್ದು, ದೇಶಾಭಿಮಾನ ಬೆಳೆಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವ ಬಗ್ಗೆ ಚಿಂತಿಸಬೇಕು ಎಂದು ಇಲ್ಲಿನ ಉಪ ತಹಸೀಲ್ದಾರ್ ವಿನಯ್ ಎಂ.ಆರಾಧ್ಯ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಡಾ.ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸ್ವಾತಂತ್ರೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಕ್ಕೆ ಶಿಕಾರಿಪುರ ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಕೊಡುಗೆ ಎಂಬ ವಿಷಯದ ಬಗ್ಗೆ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆತಿಲ್ಲ. ಸ್ವಾತಂತ್ರ್ಯಕ್ಕಾಗಿ ಹಲವು ಹೋರಾಟಗಾರರು ಜೀವ ತ್ಯಾಗ ಮಾಡಿದ್ದಾರೆ. ರಕ್ತಸಿಕ್ತ ಹೋರಾಟದ ಫಲ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯಕ್ಕಾಗಿ ಜೀವ ತ್ಯಾಗ ಮಾಡಿದ ಹೋರಾಟಗಾರರನ್ನು ನಿತ್ಯ ಸ್ಮರಿಸಬೇಕು. ಈ ಸ್ವಾತಂತ್ರ್ಯವನ್ನು ಯುವಪೀಳಿಗೆ ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ದೇಶಾಭಿಮಾನ ಹೊಂದುವ ಮೂಲಕ ಕೊಡುಗೆ ನೀಡಬೇಕು. ಸೋಲು ಗೆಲುವು ಲೆಕ್ಕಿಸದೆ ಸ್ಪರ್ಧಾತ್ಮಕ ಮನೋಭಾವನೆಯಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಅಧ್ಯಕ್ಷ ಎಚ್.ಡಿ.ಮಧುಕೇಶ್ವರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರ ಆದರ್ಶ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳದೇ ಉತ್ತಮ ಶಿಕ್ಷಣ ಪಡೆದು ಪೋಷಕರು ಹಾಗೂ ಶಿಕ್ಷಕರಿಗೆ ಗೌರವ ತರಬೇಕು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ತಾಲೂಕಿನ ಈಸೂರು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಅಪಾರವಾಗಿದೆ. ದೇಶದಲ್ಲಿಯೇ ಪ್ರಥಮ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ಹೆಗ್ಗಳಿಕೆ ಈಸೂರು ಗ್ರಾಮಕ್ಕಿದೆ. ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಜೀವ ತ್ಯಾಗ ಮಾಡಿದ್ದಾರೆ. ತಾಲೂಕಿನ ಹಾಗೂ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಠಿಯಿಂದ ಕನ್ನಡ ಸಾಹಿತ್ಯ ಪರಿಷತ್ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದೆ ಎಂದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಅಕ್ಷರ ರೆಸಿಡೆನ್ಸಿಯಲ್ ಸ್ಕೂಲ್, ದ್ವಿತೀಯ ಬಹುಮಾನ ಪುಷ್ಪಾ ವಿದ್ಯಾಸಂಸ್ಥೆ, ತೃತೀಯ ಬಹುಮಾನ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಪಡೆದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಶ್ರೀನಿವಾಸ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವನಗೌಡ ಕೋಣ್ತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಕಸಾಪ ಪದಾಧಿಕಾರಿಗಳಾದ ಪಾರಿವಾಳ ಶಿವಲಿಂಗಪ್ಪ, ಬನ್ನೂರು ಮಂಜಪ್ಪ, ವಸಂತ್, ರಸಪ್ರಶ್ನೆ ಕಾರ್ಯಕ್ರಮ ತೀರ್ಪುಗಾರರು ಶಿಕ್ಷಕ ಆರ್.ರಾಘವೇಂದ್ರ, ಸಂತೋಷ ಕುಮಾರ್, ಬಿ.ಶಿವಲಿಂಗಪ್ಪ, ನವೀನ್ ಕುಮಾರ್, ರಾಜೇಶ್ ಉಪಸ್ಥಿತರಿದ್ದರು.