ಯುವಕರು ಭಾರತದ ದೊಡ್ಡ ಶಕ್ತಿ: ರಂಭಾಪುರಿ ಜಗದ್ಗುರು
KannadaprabhaNewsNetwork | Published : Oct 18 2023, 01:00 AM IST / Updated: Oct 18 2023, 01:01 AM IST
ಯುವಕರು ಭಾರತದ ದೊಡ್ಡ ಶಕ್ತಿ: ರಂಭಾಪುರಿ ಜಗದ್ಗುರು
ಸಾರಾಂಶ
ಯುವಕರು ಭಾರತದ ದೊಡ್ಡ ಶಕ್ತಿ: ರಂಭಾಪುರಿ ಜಗದ್ಗುರುಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ಮಾನವ ಧರ್ಮ ಮಂಟಪ, ಕನ್ನಡಪ್ರಭ ವಾರ್ತೆ ಲಿಂಗಸುಗೂರು ದೇಶದ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಶಕ್ತಿ ಯುವ ಸಮೂಹದಲ್ಲಿ ಇದೆ. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಯುವ ಶಕ್ತಿ ದೇಶದ ದೊಡ್ಡ ಶಕ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅವರು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮಾನವ ಧರ್ಮ ಮಂಟಪದ 3ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ಭೂಮಿ ಬಹಳ ಮುಖ್ಯ ಅದರಂತೆ ಧರ್ಮವೂ ಮುಖ್ಯವಾಗಿದೆ. ಮನುಷ್ಯನ ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಆದರ್ಶಗಳ ಅಗತ್ಯವಿದೆ. ಮಾನವತೆಯಿಂದ ದೈವತ್ವದ ಕಡೆಗೆ ಒಯ್ಯುವ ಮಾರ್ಗವೇ ಸಂಸ್ಕೃತಿ. ಬಾಳೆಗೆ ಗೊನೆ ಇರುವಂತೆ ಬದುಕಿಗೊಂದು ಗುರಿಯಿರಬೇಕು. ಧರ್ಮದಿಂದ ವಿಮುಖರಾದರೆ ಮಾನವನ ಜೀವನ ಅಶಾಂತಿಯ ಕಡಲಾಗುತ್ತದೆ. ಬದುಕಿನ ಅರಿವು ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮವಾಗಿದೆ ಎಂದು ತಿಳಿಸಿದರು. 2024ರ ದಸರಾ ಮಹೋತ್ಸವ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಶ್ರೀ ವೀರಭದ್ರ ಶಿವಾಚಾರ್ಯರು, ರೋಣ ಶಾಸಕರಾದ ಜಿ.ಎಸ್. ಪಾಟೀಲರು ಹಾಗೂ ಅಬ್ಬಿಗೆರೆ ಸದ್ಭಕ್ತರ ಪ್ರಾರ್ಥನೆಯ ಮೇರೆಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದ 2024ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ರೋಣ ತಾಲೂಕ ಅಬ್ಬಿಗೆರೆಯಲ್ಲಿ ನೆರವೇರಿಸಲಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಕಟಿಸಿದರು. ಈ ಸಂದರ್ಭದಲ್ಲಿ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ, ಶಾಸಕ ಮಾನಪ್ಪ ಡಿ.ವಜ್ಜಲ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳನ್ನು ಮೊದಲ್ಗೊಂಡು ಬಸವಕಲ್ಯಾಣ, ಸಿಂಧನೂರು, ರೌಡಕುಂದ, ಮಸ್ಕಿ, ಮಳಲಿ, ಸಂಗೊಳ್ಳಿ, ಹಂಪಸಾಗರ ಶ್ರೀಗಳು ಸಮಾರಂಭದಲ್ಲಿ ಇದ್ದರು. ಗುರುರಕ್ಷೆ: ಲಿಂಗಸುಗೂರು ಶ್ರೀ ಮಾಣಿಕೇಶ್ವರಿ ಆಶ್ರಮದ ಮಾತಾ ನಂದೀಶ್ವರಿ ಅಮ್ಮನವರು, ವೀರಘೋಟ ಅಡವಿಲಿಂಗ ಮಹಾರಾಜರು, ವಿರೂಪಾಕ್ಷಪ್ಪ ಮಲ್ಲಜ್ಜರ ಗುತ್ತೂರು ಹಾಗೂ ದಾವಣಗೆರೆಯ ಅಂತರ್ ರಾಷ್ಟ್ರೀಯ ಯೋಗಪಟು ಡಾ.ಕೆ.ಜೈನಮುನಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಸುಮನಾ ಬಿ. ನಂದಿಕೋಲಮಠ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ವಿಶ್ವೇಶ್ವರಯ್ಯ ಹಿರೇಮಠ ಲಿಂಗಸುಗೂರು, ಮಲ್ಲಿಕಾರ್ಜುನ ಹೂಗಾರ ಗದಗ ಹಾಗೂ ಷಣ್ಮುಖಯ್ಯ ಹಿರೇಮಠ ಕಂಚಿನೆಗಳೂರು ಇವರಿಂದ ಭಕ್ತಿಗೀತೆ ಮತ್ತು ಶಿವಮೊಗ್ಗದ ಶಾಂತಾ ಆನಂದ ಹಾಗೂ ವೀರೇಂದ್ರ ಪಾಟೀಲ ಬಂಕವಳ್ಳಿ ಇವರಿಂದ ನಿರೂಪಿಸಿದರು. - - - 17ಕೆಪಿಎಲ್ಎನ್ಜಿ03 : ಲಿಂಗಸುಗೂರಲ್ಲಿ ದಸರಾ ಧರ್ಮ ಸಮ್ಮೇಳನದಲ್ಲಿ ಜಗದ್ಗುರುಗಳಿಗೆ ಗದಗದ ರೋಣದ ಅಬ್ಬಿಗೇರಿಯಲ್ಲಿ ಮುಂದಿನ ದಸರಾ ದರ್ಬಾರ ನಡೆಸುವಂತೆ ಜಗದ್ಗುರುಗಳಿಗೆ ಬೇಡಿಕೆ ಇಟ್ಟರು.