ಸಾರಾಂಶ
ಡಂಬಳ: ಗ್ರಾಮದಲ್ಲಿ ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟ ಸಂಭ್ರಮದಿಂದ ನಡೆಯಿತು. ಹಿಂದೂ-ಮುಸ್ಲಿಮರು ಸೌಹಾರ್ದಯುತವಾಗಿ ಹೋಳಿಯಾಡುವುದು ಇಲ್ಲಿಯ ವಿಶೇಷ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲಗೆ ಬಾರಿಸುತ್ತಾ ಯುವಕರು, ಮಕ್ಕಳು, ಹಿರಿಯರು, ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.ಮೈಲಾರಲಿಂಗೇಶ್ವರ, ಮರುಳಸಿದ್ದೇಶ್ವರ, ಮಾಳಿಂಗರಾಯ ಬಡಾವಣೆ, ಮುಖ್ಯ ಬಜಾರ, ಹೇಮರಡ್ಡಿ ಮಲ್ಲಮ್ಮ, ಮಾಯಮ್ಮ ದೇವಿ, ಗ್ರಾಮದೇವತೆ, ಹಾಲೇಶ್ವರ ಬಡಾವಣೆ, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣದ ರಸ್ತೆ, ಹಿರೇವಡ್ಡಟ್ಟಿ ರಸ್ತೆಯ ಪ್ಲಾಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ನೂರಾರು ಯುವಕರು ರಂಗಿನಾಟವಾಡಿ ಸಂಭ್ರಮಿಸಿದರು.
ಬೆಳಗ್ಗೆಯಿಂದಲೇ ಯುವಕರು ಗುಂಪುಗುಂಪಾಗಿ ಒಂದೆಡೆ ಸೇರಿ, ಹಲಗೆ ಬಾರಿಸುತ್ತಾ ಕೆಂಪು, ಕೇಸರಿ, ಹಸಿರು, ಹಳದಿ ಹೀಗೆ ವಿವಿಧ ಬಣ್ಣ ಹಚ್ಚಿ ಸಂಭ್ರಮಿಸಿದರು. ಇನ್ನೂಕೆಲ ಭಾಗದಲ್ಲಿ ಯುವಕರು ಹಾಡುಗಳನ್ನು ಹಚ್ಚಿ ನೃತ್ಯ ಮಾಡಿದರು.ಮಿತಿಮೀರಿದ ಬಿಸಿಲು: ಈ ವರ್ಷ ಪ್ರತಿ ವರ್ಷಕ್ಕಿಂತ ಅಧಿಕ ಬಿಸಿಲು ಇದ್ದಿದ್ದರಿಂದ ಹೋಳಿಯಾಡುವವರು ಬಸವಳಿಸುವಂತೆ ಮಾಡಿತು. ಬೆಳಗ್ಗೆಯೇ ತಾಪಮಾನ ಏರಿದ್ದರಿಂದ ಜನರು ಬಣ್ಣದಾಟ ಆಡುವ ಜತೆಗೆ ರೇನ್ ಡ್ಯಾನ್ಸ್ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಮನೆಯ ಮುಂದಿನ ನಲ್ಲಿಯ ಮೂಲಕ ಕಾರಂಜಿಯಂತೆ ಮಾಡಿಕೊಂಡು ಬಿಸಿಲಿನ ತಾಪ ತಗ್ಗಿಸಿಕೊಳ್ಳುತ್ತಿರುವುದು ಕಂಡು ಬಂದಿತು. ಇನ್ನು ಕೆಲವು ಮಕ್ಕಳು ಮನೆಯ ಮುಂದೆ ನಲ್ಲಿಯ ನೀರಿನಲ್ಲಿಯೇ ಆಡುತ್ತಿರುವುದು ಕಂಡು ಬಂದಿತು.
ಗ್ರಾಮೀಣ ಪ್ರದೇಶದಲ್ಲಿ ಹಲಗೆಗಳ ಸದ್ದು ಹೋಳಿ ಹಬ್ಬ ರಂಗೇರುವಂತೆ ಮಾಡಿತು. ಹೋಬಳಿ ಕೇಂದ್ರ ಸ್ಥಾನ ಸೇರಿದಂತೆ ಡಂಬಳ ಹೋಬಳಿಯ ಡೋಣಿ, ಡೋಣಿ ತಾಂಡಾ, ಅತ್ತಿಕಟ್ಟಿ, ಚಿಕ್ಕವಡ್ಡಟ್ಟಿ, ಮುರಡಿ ತಾಂಡಾ, ಶಿವಾಜಿನಗರ, ಕದಾಂಪುರಗಳಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಮುಂಡರಗಿ ಸಿಪಿಐ ಮಂಜುನಾಥ ಕುಸಗಲ್ಲ, ಪಿಎಸ್‌ಐ ವಿಜಯ ಪವಾರ್, ಡಂಬಳ ಠಾಣಾ ಪೊಲೀಸ್ ಬಸುರಾಜ ಬಣಕಾರ, ಸಿಬ್ಬಂದಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.