ಸಾರಾಂಶ
ಗದಗ: ಯುವಕರು ದೇಶ ಸುತ್ತಿ, ಕೋಶ ಓದಿ. ಅದರಿಂದ ಜ್ಞಾನ ಅನುಭವ ಹೊಂದಿ ವ್ಯಕ್ತಿತ್ವವನ್ನು ಪಕ್ವಗೊಳಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಎನ್.ಎಸ್.ಎಸ್. ಸಹಯೋಗದಲ್ಲಿ ಜರುಗಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಶ್ವ ಪ್ರವಾಸೋದ್ಯಮ ದಿನವನ್ನು ಐತಿಹಾಸಿಕ ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕೆಲ ಜನರ ಆಲೋಚನೆಯಂತೆ ಪ್ರವಾಸೋದ್ಯಮದಿಂದ ಆದಾಯ ಮತ್ತು ಉದ್ಯೋಗ ಸೃಷ್ಟಿ ಆಗುತ್ತದೆ. ಇನ್ನೂ ಕೆಲವರು ಪ್ರವಾಸೋದ್ಯಮ ಅಂದರೆ ಮನರಂಜನೆಯ ಕ್ಷೇತ್ರ ಎಂದು ಹೇಳುತ್ತಾರೆ, ನಿಜವಾಗಿ ನಮ್ಮ ಹಿರಿಯರು ಹೇಳಿದಂತೆ ದೇಶ ಸುತ್ತಿ, ಕೋಶ ಓದಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎಂದರು.
ಪ್ರವಾಸ ಮಾಡುವುದರಿಂದ, ಅಲ್ಲಿರುವ ದೃಶ್ಯವನ್ನು ನೋಡಿದಾಗ ನಮಗೆ ಅರಿವಿಲ್ಲದೆ ಜ್ಞಾನ, ಅನುಭವ ಬರುತ್ತದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಸೃಷ್ಟಿಸಿರುವ ಶಿಲ್ಪಕಲೆ ಮುಚ್ಚಿ ಹೋಗಿದೆ. ಹೊಯ್ಸಳ ದೊರೆ ವಿಷ್ಣುವರ್ಧನ ಕಾಲದಲ್ಲಿ ಗದುಗಿನ ವೀರನಾರಾಯಣ, ಬೇಲೂರಿನ ಚೆನ್ನಕೇಶವ, ನಂದಿ ನಾರಾಯಣ ಹಾಗೆಯೇ ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಲಕ್ಕುಂಡಿ ಒಂದು ಕಾಲದಲ್ಲಿ ವೈಭವದಿಂದ ಮೆರೆದಿತ್ತು. ಅದು ಅಜರಾಮರವಾಗಿ ಉಳಿಯಬೇಕಿತ್ತು, ಆದರೆ, ನಮ್ಮ ಪರಿಸ್ಥಿತಿ ಮತ್ತು ಮನಃಸ್ಥಿತಿ ಅನುಗುಣವಾಗಿ ಎಲ್ಲವೂ ಬದಲಾಯಿಸಿದ್ದೇವೆ. ನಾವೆಲ್ಲರೂ ಜಾಗೃತರಾಗಿ ಮೂಲ ದೇವಾಲಯ, ವಾಸ್ತುಶಿಲ್ಪವನ್ನು ಉಳಿಸಿಕೊಂಡು ಅದಕ್ಕೆ ಗೌರವ ನೀಡಿ ಉಳಿದವರಿಗೂ ಗೌರವ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.ವೀರನಾರಾಯಣ ದೇವಸ್ಥಾನದ ಮೂಲ ಮಂಟಪದರಲ್ಲಿರುವ ಶ್ರೇಷ್ಠ ಶಿಲಾ ಕಲಾಕೃತಿ, ವಾಸ್ತುಶಿಲ್ಪ ಗಮನಿಸಿದಾಗ ಪ್ರೀತಿ ಗೌರವ ಮೂಡುತ್ತದೆ. ನಮ್ಮ ಐತಿಹಾಸಿಕ ಹಿನ್ನೆಲೆ ಉಳಿಯಬೇಕು. ಹಾಗಾಗಿ, ಪ್ರವಾಸೋದ್ಯಮ ನೀತಿಯಲ್ಲಿ ಹೊಸದಾಗಿ ಬದಲಾವಣೆ ಮಾಡಿ ಶಾಲಾ-ಕಾಲೇಜು ಮಕ್ಕಳಿಗೆ ಪ್ರವಾಸ ಮಾಡಲು ಹೆಚ್ಚು ಅವಕಾಶ ಸೃಷ್ಟಿಸಿದರೆ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕವಾಗುತ್ತದೆ. ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು ಎಂಬ ಕೂಗು ಕೇಳಿಬರುತ್ತಿದ್ದು, ಆದಷ್ಟು ಬೇಗನೆ ಯುನೆಸ್ಕೋ ಪಟ್ಟಿಗೆ ಸೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಶಿರಹಟ್ಟಿಯ ಎಫ್.ಎಂ. ಡಬಾಲಿ, ಪಿಯು ಕಾಲೇಜು ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿದರು. ಪ್ರವಾಸೋದ್ಯಮ ಕುರಿತು ಬರೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಶ್ರೀವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಆನಂದ ಪೊತ್ನೀಸ್, ಬಿ.ಬಿ. ಅಸೂಟಿ, ಕೆಡಿಪಿ ಸಮಿತಿಯ ಸದಸ್ಯ ಎಸ್.ಎನ್. ಬಳ್ಳಾರಿ, ಅಶೋಕ ಮಂದಾಲಿ, ಲಕ್ಕುಂಡಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ, ಎನ್.ಎಸ್.ಎಸ್. ನೂಡಲ್ ಅಧಿಕಾರಿ ವಿ.ಎಸ್. ಕೊಳ್ಳಿ ಇದ್ದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ ಸ್ವಾಗತಿಸಿದರು. ಉಪನ್ಯಾಸಕ ಬಾಹುಬಲಿ ಜೈನ್ ನಿರ್ವಹಿಸಿದರು.