ಕನ್ನಡಪ್ರಭ ವಾರ್ತೆ ಕೊಪ್ಪಳ
ಯುವ ಜನೋತ್ಸವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜರುಗಿದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯುವ ಮೇಳಗಳು, ಯುವಜನೋತ್ಸವಗಳು ಯುವಜನರಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಹೊರಹಾಕಲು ಅನುಕೂಲ ಆಗುತ್ತವೆ. ಪ್ರತಿಭೆ ಎಂಬುದು ಒಂದು ದೇವರು ನೀಡಿದ ಉಡುಗೊರೆ. ಅದನ್ನು ಜಗತ್ತಿಗೆ ಪ್ರಚುರಪಡಿಸಬೇಕು. ಯುವ ಜನೋತ್ಸವಗಳು ಕಲಾವಿದರ ಮನಸ್ಸುಗಳನ್ನು ಒಂದು ಕಲಾ ಶಕ್ತಿಯಾಗಿ ರೂಪಿಸುತ್ತವೆ ಜೊತೆಗೆ ಪೂರಕ ಪರಿಸರ ಸೃಷ್ಟಿಸುತ್ತವೆ ಎಂದರು.ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಯುವಜನರು ಪಾಲ್ಗೊಳ್ಳುವಂತೆ ವಿವಿಧ ಇಲಾಖೆಗಳ ಸಹಯೋಗಕ್ಕೆ ಪತ್ರ ಬರೆಯಲಾಗುವುದು. ಸಾಧಕ ಕಲಾವಿದರು, ಸಾಹಿತಿಗಳನ್ನು ಗುರುತಿಸುವ ಮೂಲಕ ಅವರ ಸಾಧನೆ ಇನ್ನೊಬ್ಬರಿಗೆ ಸ್ಫೂರ್ತಿ ದೊರಕುತ್ತದೆ. ಪ್ರತಿಭೆ ಹೊರಹಾಕಲು ಇದು ಅತ್ಯುತ್ತಮ ವೇದಿಕೆ ಎಂದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಕೆ.ವಿ. ಮಾತನಾಡಿ, ಸದೃಢ ದೇಹ ಹಾಗೂ ಸದೃಢ ಮನಸ್ಸು ನಿರ್ಮಾಣವಾಗಲು ಈ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳು ಅಗತ್ಯ. ಇದರಿಂದ ವ್ಯಕ್ತಿತ್ವ ವಿಕಸನಕ್ಕೂ ಅನುಕೂಲ. ಕೇವಲ ಓದುವುದು ಒಂದೇ ಬದುಕಲ್ಲ. ಪಠ್ಯೇತರ ಚಟುವಟಿಕೆಗಳು ಸಹ ಬಹಳ ಮುಖ್ಯ ಎಂದು ಹೇಳಿದರು.ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ಎ.ಎಂ. ಮದರಿ ಮಾತನಾಡಿ, ಬದುಕಿನಲ್ಲಿ ಏರಿಳಿತಗಳು, ನೋವು ನಲಿವುಗಳ ಸಹಜ. ಯಶಸ್ಸು ಪಡೆಯಲು ಬೇಕಾದ ಅರ್ಹತೆ ಗಳಿಸಿಕೊಳ್ಳುವುದು ಕೂಡ ಸವಾಲು. ಎಲ್ಲೋ ಹುಟ್ಟಿ ಇನ್ನೆಲ್ಲೋ ಬೆಳೆಯುತ್ತೇವೆ. ಜಾತಿಯ ಅಪಮಾನ ಸಹಿಸಿಕೊಂಡು ಬೆಳೆದು ಬಂದಿದ್ದೇನೆ. ಬದುಕು ಋಣದ ರತ್ನದ ಗಣಿ ಎನ್ನುವಂತೆ ಅನೇಕ ಜನ ಸ್ನೇಹಿತರ ನೆರವಿನಿಂದ ಬದುಕು ಈ ಹಂತಕ್ಕೆ ಬಂದು ನಿಂತಿದೆ ಎಂದರು.ಯುವ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಯುವ ಸಂಘಗಳ ಸಬಲೀಕರಣಕ್ಕೆ ವಿವಿಧ ಆಯಾಮಗಳಲ್ಲಿ ಪ್ರೋತ್ಸಾಹದ ಅಗತ್ಯವಿದೆ. ನರೇಗಾದಲ್ಲಿ ಯುವ ಸಂಘಗಳ ಕಟ್ಟಡ ಕಟ್ಟಲು ನೆರವಾಗಬೇಕು. ಯುವ ಸಾಧಕರನ್ನು ಪರಿಗಣಿಸಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧಕರಿಗೆ ಆರ್ಥಿಕ ನೆರವು ನೀಡಬೇಕು ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗುಂಡಪ್ಪ ವಿಭೂತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ನಿವೃತ್ತ ಪ್ರಾಂಶುಪಾಲ ಸಿ.ವಿ. ಜಡಿಯವರ, ಪತ್ರಕರ್ತ ಪ್ರಮೋದ ಕುಲಕರ್ಣಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಜ್ಯೋತಿ ಎಂ. ಗೊಂಡಬಾಳ, ಜಗದಯ್ಯ ಸಾಲಿಮಠ, ಸಾಹಿತಿ ಜೆ.ಎಸ್. ಗೋನಾಳ, ಸೂಪರಿಂಟೆಂಡೆಂಟ್ ನಾಗರಾಜ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಲಲಿತಮ್ಮ ಹಿರೇಮಠ, ಆನಂದ ಹಳ್ಳಿಗುಡಿ ಇದ್ದರು.ತಾಲೂಕಿನ ದದೇಗಲ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ತೋಟದ ಜಿಲ್ಲಾಮಟ್ಟದ ಯುವಜನೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದರು.ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಥೆ ಬರೆಯುವ ಸ್ಪರ್ಧೆ, ಜಾನಪದ ಗೀತೆಯ ಸ್ಪರ್ಧೆಯ ವೈಯಕ್ತಿಕ ವಿಭಾಗ ಮತ್ತು ಗುಂಪು ವಿಭಾಗದಲ್ಲಿ ಅಕ್ಷತಾ ತೋಟದ ಹಾಗೂ ತಂಡದವರು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಈ ಜನೋತ್ಸವದಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರರಾದರು.ಜಾನಪದ ಗೀತೆ ವೈಯಕ್ತಿಕ ವಿಭಾಗದಲ್ಲಿ ಆಕಾಶ ಬಂಡಿ (ಪ್ರಥಮ), ಗುಂಪು ವಿಭಾಗದಲ್ಲಿ ಸರಸ್ವತಿ ಸಾಂಸ್ಕೃತಿಕ ಕಲಾ ತಂಡ ಕುಷ್ಟಗಿ (ಪ್ರಥಮ), ಜಾನಪದ ನೃತ್ಯ ವೈಯಕ್ತಿಕ ವಿಭಾಗದಲ್ಲಿ ತೇಜಸ್ವಿನಿ (ಪ್ರಥಮ), ಪಾರ್ವತಿ (ದ್ವಿತೀಯ), ಜಾನಪದ ನೃತ್ಯ ಗುಂಪು ವಿಭಾಗದಲ್ಲಿ ಮಂಜುಳಾ ಹಾಗೂ ಸಂಗಡಿಗರು (ಪ್ರಥಮ) ಸ್ಥಾನ ಗಳಿಸಿದರು.ಕಥೆ ಬರೆಯುವ ಸ್ಪರ್ಧೆಯಲ್ಲಿ “ತಾಯಿಯ ಮಡಿಲು” ಕುರಿತು ಬರೆದ ಸ್ಪರ್ಧೆಗೆ ಪ್ರಥಮ ಬಹುಮಾನ ಲಭಿಸಿತು. ಘೋಷಣೆ ವಿಭಾಗದಲ್ಲಿ ಶ್ವೇತಾ ಆರ್. (ಪ್ರಥಮ) ಹಾಗೂ ಸುಮಾ (ದ್ವಿತೀಯ), ಚಿತ್ರಕಲಾ ಪೋಸ್ಟರ್ ಮೇಕಿಂಗ್ ವಿಭಾಗದಲ್ಲಿ ಮಾಧುರಿ (ಪ್ರಥಮ) ಮತ್ತು ಸಿಂಧೂ (ದ್ವಿತೀಯ), ಫೋಟೊಗ್ರಫಿಯಲ್ಲಿ ಮುತ್ತುರಾಜ ಲಳಗಿ (ಪ್ರಥಮ), ಮಲ್ಲಿಕಾರ್ಜುನ ಕಟ್ಟಿ (ದ್ವಿತಿಯ), ದೇವರಾಜ ಹಡಪದ (ತೃತೀಯ) ಸ್ಥಾನಪಡೆದರು.ಪ್ರತಿಭೆ ಅನಾವರಣಕ್ಕೆ ಯುವ ಜನೋತ್ಸವ ಸೂಕ್ತ ವೇದಿಕೆ
ಯುವ ಮೇಳಗಳು, ಯುವಜನೋತ್ಸವಗಳು ಯುವಜನರಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಹೊರಹಾಕಲು ಅನುಕೂಲ ಆಗುತ್ತವೆ. ಪ್ರತಿಭೆ ಎಂಬುದು ಒಂದು ದೇವರು ನೀಡಿದ ಉಡುಗೊರೆ. ಅದನ್ನು ಜಗತ್ತಿಗೆ ಪ್ರಚುರಪಡಿಸಬೇಕು. ಯುವ ಜನೋತ್ಸವಗಳು ಕಲಾವಿದರ ಮನಸ್ಸುಗಳನ್ನು ಒಂದು ಕಲಾ ಶಕ್ತಿಯಾಗಿ ರೂಪಿಸುತ್ತವೆ ಜೊತೆಗೆ ಪೂರಕ ಪರಿಸರ ಸೃಷ್ಟಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಯುವಜನರು ಪಾಲ್ಗೊಳ್ಳುವಂತೆ ವಿವಿಧ ಇಲಾಖೆಗಳ ಸಹಯೋಗಕ್ಕೆ ಪತ್ರ ಬರೆಯಲಾಗುವುದು. ಸಾಧಕ ಕಲಾವಿದರು, ಸಾಹಿತಿಗಳನ್ನು ಗುರುತಿಸುವ ಮೂಲಕ ಅವರ ಸಾಧನೆ ಇನ್ನೊಬ್ಬರಿಗೆ ಸ್ಫೂರ್ತಿ ದೊರಕುತ್ತದೆ. ಪ್ರತಿಭೆ ಹೊರಹಾಕಲು ಇದು ಅತ್ಯುತ್ತಮ ವೇದಿಕೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.