ಕಾಡುಗೊಲ್ಲ ಜಾತಿಯ ದೃಢೀಕರಣ ಪತ್ರ ನೀಡಲು ಯುವ ಸೇನೆ ತುಮಕೂರು ಜಿಲ್ಲಾಧಿಕಾರಿಗೆ ಮನವಿ

| Published : Jul 05 2024, 12:53 AM IST

ಕಾಡುಗೊಲ್ಲ ಜಾತಿಯ ದೃಢೀಕರಣ ಪತ್ರ ನೀಡಲು ಯುವ ಸೇನೆ ತುಮಕೂರು ಜಿಲ್ಲಾಧಿಕಾರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡುಗೊಲ್ಲ ಜಾತಿ ದೃಢೀಕರಣ ಪತ್ರ ನೀಡಲು ಕಟ್ಟುನಿಟ್ಟಿನ ಆದೇಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ವತಿಯಿಂದ ತುಮಕೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಕಾಡುಗೊಲ್ಲರ ಯುವ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ । ಅರ್ಹರಿಗೆ ನೀಡಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ತುಮಕೂರು

ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಜನರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಕಾಡುಗೊಲ್ಲ ಜಾತಿ ದೃಢೀಕರಣ ಪತ್ರ ನೀಡಲು ಕಟ್ಟುನಿಟ್ಟಿನ ಆದೇಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ಕಾಡುಗೊಲ್ಲ ಯುವಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಸವಿತ ಅವರಿಗೆ ಆಗ್ರಹ ಪೂರ್ವಕ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆಯ ರಾಜ್ಯಾಧ್ಯಕ್ಷ ಅರುಣ್‌ ಕೃಷ್ಣಯ್ಯ, ಸರ್ಕಾರ ಕಾಡುಗೊಲ್ಲ ಸಮುದಾಯದ ಜನರಿಗೆ ಅವರ ದಾಖಲೆಗಳನ್ನು ಪರಿಶೀಲಿಸಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಹಲವಾರು ಸುತ್ತೋಲೆಗಳ ಮತ್ತು ಆದೇಶಗಳ ಮೂಲಕ ಸೂಚನೆ ನೀಡಿದ್ದರೂ ಇದುವರೆಗೂ ಸಮರ್ಪಕ ರೀತಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿಲ್ಲ. 2017 ಮತ್ತು 2018ರ ಆದೇಶ ಪತ್ರಗಳನ್ನೇ ಮುಂದಿಟ್ಟುಕೊಂಡು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸರ್ಟಿಪಿಕೇಟ್ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರ 2002 ರಲ್ಲಿ ಹೊರಡಿಸಿರುವ ಆದೇಶ ಸಂಖ್ಯೆಯನ್ವಯ ಕಾಡುಗೊಲ್ಲ ಜಾತಿಯನ್ನು ಪ್ರವರ್ಗ ಪಟ್ಟಿಯ ಒಂದರ ಕ್ರಮಸಂಖ್ಯೆ 86 (ಎಕ್ಸ್)ನಲ್ಲಿನ ಕಾಡುಗೊಲ್ಲ ಜನಾಂಗಕ್ಕೆ ಜಾತಿ ಪ್ರಮಾಣಪತ್ರವನ್ನು ನೀಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಈ ಆದೇಶಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತೊಮ್ಮೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಆಯುಕ್ತರಿಗೆ 2023ರ ಸುತ್ತೊಲೆಯನ್ನು ಸಹ ಹೊರಡಿಸಿದೆ. ಇಷ್ಟು ಆದೇಶಗಳಾದರು ಜಾತಿ ಪ್ರಮಾಣಪತ್ರವನ್ನು ವಿತರಿಸದೇ ಇರುವುದು ವಿಷಾದನೀಯ ಎಂದು ಹೇಳಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚನೆಗೊಳಿಸಿದ್ದು ಕಾಡುಗೊಲ್ಲ ಜಾತಿ ಪ್ರಮಾಣಪತ್ರವಿಲ್ಲದೆ ಅಭಿವೃದ್ಧಿ ನಿಗಮದ ಯೋಜನೆ, ಸಹಾಯಧನಗಳನ್ನು ಸಮುದಾಯದ ಜನತೆ ಪಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದ ಅವರು, ಸರ್ಕಾರವೇ ಅಧಿಕಾರಿಗಳು ಕಾಡುಗೊಲ್ಲ ಜಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕೇವಲ ಶಾಲಾ ದಾಖಲಾತಿಗೆ ಮಾತ್ರ ಜೋತು ಬೀಳದೆ, ಸ್ಥಳಿಯ ನಿವಾಸಿಗಳಿಂದ ದೃಢೀಕರಣ ಪಡೆದು, ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಈ ಕಾರ್ಯ ನಡೆಯುತ್ತಿಲ್ಲ. ಜಿಲ್ಲಾಧಿಕಾರಿ ಮುಂದಿನ ಒಂದು ತಿಂಗಳ ಒಳಗೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಮತ್ತು ಗ್ರಾಮ ಅಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಕ್ತ ತಿಳುವಳಿಕೆ ನೀಡಿ, ಕಾಡುಗೊಲ್ಲ ಜಾತಿ ಪ್ರಮಾಣಪತ್ರ ಅರ್ಹರಿಗೆ ವಿತರಣೆಯಾಗುವಂತೆ ಮಾಡಬೇಕು. ಇಲ್ಲದಿದ್ದಲ್ಲಿ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರ ಕಾಡುಗೊಲ್ಲರ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ, ಆ ಮೂಲಕ ಗಂಗಾ ಕಲ್ಯಾಣ, ಪ್ರವಾಸಿ ಟ್ಯಾಕ್ಸಿ, ಅರ್ಥಿಕ, ಶೈಕ್ಷಣಿಕ ಸವಲತ್ತುಗಳನ್ನು ನೀಡಲು ಹೊರಟಿದೆ. ಆದರೆ ಸರ್ಕಾರದ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಕಾಡುಗೊಲ್ಲ ಸಮುದಾಯದವರ ಬಳಿ ಜಾತಿ ಪ್ರಮಾಣಪತ್ರವೇ ಇಲ್ಲ. ಇದರಿಂದ ನಿಗಮ ರಚಿಸಿಯೂ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಜಿಲ್ಲೆಯ ಎಲ್ಲಾ ತಹಸೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಿ, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು

ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆಯ ಸಂಸ್ಥಾಪಕ ಅಧ್ಯಕ್ಷ ಜಿ.ವಿ.ರಮೇಶ್, ಪದಾಧಿಕಾರಿಗಳಾದ ಪ್ರಕಾಶ್, ಪವನ, ಕುಮಾರ್, ಗುರುಶಾಂತ್, ಸುಚೇಂದ್ರ ಮತ್ತಿತರರು ಇದ್ದರು.