ಸಾರಾಂಶ
ಹೊಸಪೇಟೆ: ಯುವ ಜನತೆ ಪ್ರೋತ್ಸಾಹಿಸಲು ಯುವನಿಧಿ ಯೋಜನೆಯ ಮೂಲಕ ವಿವಿಧ ಕೌಶಲ್ಯಾಧರಿತ ತರಬೇತಿಗಳನ್ನು ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಯುವನಿಧಿ ಪ್ಲಸ್ ಯೋಜನೆ ಜಾರಿ ಮಾಡಿದ್ದು, ಯುವಕ, ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.
ನಗರದ ಟಿಎಂಎಇಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಯುವನಿಧಿ ಮತ್ತು ಯುವನಿಧಿ ಪ್ಲಸ್ ಯೋಜನೆ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಯುವನಿಧಿ ಯೋಜನೆಯಡಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಕೇವಲ ಧನಸಹಾಯ ಪಡೆಯುವುದಷ್ಟೇ ಅಲ್ಲದೇ ನಿರುದ್ಯೋಗ ಸಮಸ್ಯೆಯನ್ನು ತೊಲಗಿಸಿ ಸ್ವಂತ ಉದ್ಯೋಗ ಸೃಷ್ಟಿ ಮಾಡಿಕೊಳ್ಳುವಷ್ಟು ಸಬಲರನ್ನಾಗಿಸಲು ರಾಜ್ಯ ಸರ್ಕಾರ ಹೊಸ ಅಲೋಚನೆಗಳೊಂದಿಗೆ ಯುವನಿಧಿ ಪ್ಲಸ್ ಯೋಜನೆ ಆರಂಭಿಸಿದೆ. ಈಗಾಗಲೇ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 8007 ಫಲಾನುಭವಿಗಳು ನೋಂದಣಿ ಮಾಡಿದ್ದಾರೆ. ಪ್ರಸ್ತುತ 109 ಅಭ್ಯರ್ಥಿಗಳಿಗೆ ಸರ್ಕಾರಿ ಸಂಸ್ಥೆಗಳಿಂದ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಹಂತ ಹಂತವಾಗಿ ಎಲ್ಲ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಸರ್ಕಾರಿ ಪರಿಕರ ಕೊಠಡಿ ಮತ್ತು ತರಬೇತಿ ಕೇಂದ್ರ, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವೃತ್ತಿಪರ ತರಬೇತಿ ಪೂರೈಕೆದಾರರು ಸೇರಿದಂತೆ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ಈ ಯೋಜನೆ ಬಳಸಿಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್. ಹಟ್ಟಪ್ಪ ಮಾತನಾಡಿ, ಯುವನಿಧಿ ಫಲಾನುಭವಿಗಳು ಕಡ್ಡಾಯವಾಗಿ ಉಚಿತ ಕೌಶಲ್ಯ ತರಬೇತಿ ಪಡೆಯಲು ಹೆಚ್ಚು ಆಸಕ್ತಿ ವಹಿಸಬೇಕಿದೆ. ಮುಂದಿನ ದಿನಗಳಲ್ಲಿ ಯುವಜನತೆಗೆ ಆಸಕ್ತಿದಾಯಕ ತರಬೇತಿಗಳನ್ನು ನೀಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ವಹಿಸಿದೆ. ಸದ್ಯಕ್ಕೆ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಿಂದ ತರಬೇತಿ ನೀಡಲು ಮುಂದಾಗಿದೆ. ನಿರೀಕ್ಷೆಗೆ ಮೀರಿ ಯುವಕರಿಂದ ನೋಂದಾಣಿಗಳಾದಲ್ಲಿ ತರಬೇತಿ ಕೇಂದ್ರಗಳು ಮತ್ತು ಸಂಸ್ಥೆಗಳನ್ನು ವಿಸ್ತರಿಸಲಾಗುವುದು. ನಿರುದ್ಯೋಗ ವಿದ್ಯಾವಂತ ಯುವಕ ಮತ್ತು ಯುವತಿಯರಿಗೆ ಕೌಶಲ್ಯಾಧರಿತ ತರಬೇತಿಗಳ ಅಗತ್ಯವಿದೆ. ಜತೆಗೆ ಯುವನಿಧಿ ಫಲಾನುಭವಿಗಳು ಸಹ ಕಡ್ಡಾಯವಾಗಿ ಸರ್ಕಾರದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವೆಬ್‌ಸೈಟ್ https://www.kaushalkar.com/app/registration_verify ಮೂಲಕ ನೋಂದಾಯಿಸಿಕೊಳ್ಳಬೇಕಿದೆ ಎಂದರು.ಈ ವೇಳೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಚ್. ಜಂದಿಸಾಹೇಬ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಪಿ.ಎಚ್. ದೇವರಾಜ್, ಟಿಎಂಎಇಎಸ್ ಪಾಲಿಟೆಕ್ನಿಕ್ ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ಎಚ್. ಶಂಕರಾನಂದ, ಉಪಪ್ರಾಚಾರ್ಯ ಟಿ. ನಜರುದ್ದೀನ್, ಟಿಎಂಎಇಎಸ್ ಪಾಲಿಟೆಕ್ನಿಕ್ ಐಟಿಐ ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಪ್ಪ ಭಾಗವಹಿಸಿದ್ದರು.