ತಾಲೂಕು ಗ್ಯಾರಂಟಿ ಸಮಿತಿಯೂ ಜಿಲ್ಲೆಯಲ್ಲಿಯೇ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಅತಿಹೆಚ್ಚು ಸಭೆ ನಡೆಸಿದ ಕೀರ್ತಿ ಹೊಂದಿದೆ. ರಾಜ್ಯ ಸರ್ಕಾರದ ೫ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದೇವೆ. ಪದವಿ, ಡಿಪ್ಲೋಮೋ ಪಡೆದ ನಿರುದ್ಯೋಗಿ ಯುವಕರಿಗಾಗಿ ನಿರುದ್ಯೋಗ ಭತ್ಯೆ ಪಡೆಯುವ ಯುವನಿಧಿ ಯೋಜನೆಗಾಗಿ ಯುವಕರ ನೋಂದಣಿಗಾಗಿ ಮುಂದಿನ ಮಾರ್ಚ್ ಎರಡನೇ ವಾರದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಮತ್ತು ಸದಸ್ಯ ಕಾರ್ಯದರ್ಶಿ ತಾಲೂಕು ಪಂಚಾಯಿತಿ ಇಒ ಮತ್ತು ಉದ್ಯೋಗ ಮತ್ತು ನೊಂದಾಣಾಧಿಕಾರಿಗಳೊಂದಿಗೆ ಸೇರಿ ಯುವನಿಧಿ ಸಪ್ತಾಹ ಹಮ್ಮಿಕೊಳ್ಳುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗ್ಯಾರಂಟಿ ಯೋಜನೆಯ ಭಾಗವಾಗಿರುವ ಯುವನಿಧಿ ಯೋಜನೆಗೆ ಫಲಾನುಭವಿಗಳನ್ನು ಗುರ್ತಿಸುವ ಸಲುವಾಗಿ ತಾಲೂಕು ಗ್ಯಾರಂಟಿ ಸಮಿತಿಯೂ ತಾಲೂಕಿನ ಪ್ರತಿ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನೋಂದಣಿ ಕುರಿತಾಗಿ ಅರಿವು ಮೂಡಿಸುವ ಯುವನಿಧಿ ಸಪ್ತಾಹ ಹಮ್ಮಿಕೊಳ್ಳುವುದಾಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್.ಪಿ. ಪ್ರಕಾಶ್‌ ಗೌಡ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ೨೩ನೇ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಗ್ಯಾರಂಟಿ ಸಮಿತಿಯೂ ಜಿಲ್ಲೆಯಲ್ಲಿಯೇ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಅತಿಹೆಚ್ಚು ಸಭೆ ನಡೆಸಿದ ಕೀರ್ತಿ ಹೊಂದಿದೆ. ರಾಜ್ಯ ಸರ್ಕಾರದ ೫ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದೇವೆ. ಪದವಿ, ಡಿಪ್ಲೋಮೋ ಪಡೆದ ನಿರುದ್ಯೋಗಿ ಯುವಕರಿಗಾಗಿ ನಿರುದ್ಯೋಗ ಭತ್ಯೆ ಪಡೆಯುವ ಯುವನಿಧಿ ಯೋಜನೆಗಾಗಿ ಯುವಕರ ನೋಂದಣಿಗಾಗಿ ಮುಂದಿನ ಮಾರ್ಚ್ ಎರಡನೇ ವಾರದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಮತ್ತು ಸದಸ್ಯ ಕಾರ್ಯದರ್ಶಿ ತಾಲೂಕು ಪಂಚಾಯಿತಿ ಇಒ ಮತ್ತು ಉದ್ಯೋಗ ಮತ್ತು ನೊಂದಾಣಾಧಿಕಾರಿಗಳೊಂದಿಗೆ ಸೇರಿ ಯುವನಿಧಿ ಸಪ್ತಾಹ ಹಮ್ಮಿಕೊಳ್ಳುವುದಾಗಿ ಹೇಳಿದರು.ಇನ್ನೂ ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ೮೧,೧೧೧ ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಪ್ರಸ್ತುತ ೭೯,೭೦೬ ಮಹಿಳೆಯರಿಗೆ ಯೋಜನೆಯಿಂದ ಪ್ರತಿ ಮಾಸಿಕ ೨೦೦೦ ರು. ಹಣ ಬರುತ್ತಿದೆ. ಪ್ರತಿ ತಿಂಗಳಿಗೆ ಗೃಹಲಕ್ಷ್ಮೀ ಯೋಜನೆಗೆ ೧೫.೯೨ ಕೋಟಿ ರು. ಹಣ ಬರುತ್ತಿದ್ದು ಶೇ. ೯೮.೧೪ರಷ್ಟು ಪ್ರಗತಿ ಸಾಧಿಸಲಾಗಿದೆ. ಹೊಸದಾಗಿ ೧೧೦ ಅರ್ಜಿಗಳು ಬಂದಿದ್ದು, ಅವುಗಳಿಗೂ ಯೋಜನೆ ಲಾಭ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಅನರ್ಹವೆಂಬುದು ಕಂಡುಬಂದ ಹಿನ್ನೆಲೆಯಲ್ಲಿ ೧೧೭೪ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿ ಉಳಿಕೆ ೭೭,೭೯೭ ಬಿಪಿಎಲ್ ಕಾರ್ಡ್ ಹಾಗೂ ೬೬೦೭ ಎಪಿಎಲ್ ಕಾರ್ಡ್ ಮತ್ತು ೩೯೦೯ ಎವೈ ಕಾರ್ಡುದಾರರಿದ್ದು ಒಟ್ಟು ೮೨,೩೬೬ ತಾಲೂಕಿನಲ್ಲಿ ಪಡಿತರ ಕಾರ್ಡ್‌ಗಳಿವೆ ಎಂದು ಮಾಹಿತಿ ನೀಡಿದರು.ಗೃಹಜ್ಯೋತಿ ಯೋಜನೆಗೆ ತಾಲೂಕಿನಲ್ಲಿ ೮೮,೧೦೩ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ೮೩,೧೦೮ ಅರ್ಹ ಫಲಾನುಭವಿಗಳು ಗೃಹಜ್ಯೋತಿಯಲ್ಲಿ ಉಚಿತವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ಶೇ.೯೯.೭೭ರಷ್ಟು ಪ್ರಗತಿ ಸಾಧಿಸಿದೆ. ಇದರ ಜೊತೆಗೆ ಶಕ್ತಿ ಯೋಜನೆಯ ಮೂಲಕ ತಾಲೂಕಿನಲ್ಲಿ ಪ್ರತಿ ತಿಂಗಳು ಸರಾಸರಿ ೮,೨೧,೫೬೯ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಸರ್ಕಾರದಿಂದ ೨.೯೯ ಕೋಟಿ ರು. ಅನುದಾನ ಬಂದಿದೆ. ಎಂದ ಅವರು ರಾಜ್ಯಸಮಿತಿಯ ನಿರ್ದೇಶನದ ಮೇರೆಗೆ ಬಸ್‌ ನಿಲ್ದಾಣವನ್ನು ಸಮಿತಿಯೂ ಪರಿಶೀಲನೆ ನಡೆಸಿ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪನೆಗೆ ಕ್ರಮ ವಹಿಸಲಾಗಿದೆ ಎಂದರು. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್, ಸೇರಿ ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು, ಮತ್ತು ಅಧಿಕಾರಿಗಳು ಹಾಜರಿದ್ದರು.