ಕರಿಯ ಎಚ್‌ಡಿಕೆ ಹೇಳಿಕೆ: ಜಮೀರ್‌ ಕ್ಷಮೆಯಾಚನೆ

| Published : Nov 13 2024, 12:03 AM IST

ಸಾರಾಂಶ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ)’ ಎಂದಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ತಮ್ಮ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಕ್ಷಮೆ ಕೋರಿದ್ದಾರೆ.

- ಚುನಾವಣೆ ಕಾರಣ ಈಗ ವಿವಾದ ಮಾಡಿದ್ದಾರೆ- ಜೆಡಿಎಸ್‌ನವರಿಗೆ ನೋವಾಗಿದ್ದರೆ ಕ್ಷಮೆ ಕೇಳ್ತೀನಿ

ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ)’ ಎಂದಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ತಮ್ಮ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಕ್ಷಮೆ ಕೋರಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ನಾನು, ಕುಮಾರಸ್ವಾಮಿ ಆತ್ಮೀಯರಾಗಿದ್ದವರು. ಅವರು ನನ್ನನ್ನು ಕುಳ್ಳ ಅಂತಾ ಇದ್ರು, ನಾನು ಕರಿಯಣ್ಣ ಅಂತಿದ್ದೆ. ಈಗ ಚುನಾವಣೆ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ವಿಚಾರ ಮಾಡ್ತಾ ಇದ್ದಾರೆ ಎಂದರು.

ನಾನು ಅವರನ್ನು ಕರಿಯಣ್ಣ ಎನ್ನುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಹೇಳಿದ್ದೇನೆ. ಒಂದು ವೇಳೆ ನನ್ನ ಮಾತಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳ್ತೀನಿ. ನನ್ನ ಹೇಳಿಕೆಯಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದರು.

ದೇವೇಗೌಡರ ಕುಟುಂಬ ಕೊಂಡುಕೊಳ್ಳುತ್ತೇನೆ ಎಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್ ಅವರು, ಯಾರಾದರೂ ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳಲು ಸಾಧ್ಯವಾ?. ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮುಸ್ಲಿಂ ಮತಗಳು ಬೇಡ ಎಂದಿದ್ದರು. ಈಗ ದುಡ್ಡು ಕೊಟ್ಟು ಖರೀದಿಸಲು ಮುಂದಾಗಿದ್ದಾರೆ. ಅದನ್ನು ಉಲ್ಲೇಖಿಸಿ ನಾನು ಹೇಳಿದ್ದೇನೆ ಅಷ್ಟೇ ಎಂದು ಹೇಳಿದರು.