ಸಾರಾಂಶ
ಕಾರವಾರ:
ಸಚಿವ ಜಮೀರ್ ಅಹ್ಮದ್ ತೆಲಂಗಾಣ ಚುನಾವಣಾ ಪ್ರಚಾರದ ಭಾಷಣದಲ್ಲಿ ಸಾಂವಿಧಾನಿಕ ಸ್ಥಾನವಾದ ಸ್ಪೀಕರ್ ಹುದ್ದೆಗೆ ಧರ್ಮದ ಮತ್ತು ಜಾತಿಯ ಭಾವನೆ ಮೂಡಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಸಿದ್ದಾಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮುಸ್ಲಿಮರನ್ನು ಸ್ಪೀಕರ್ ಮಾಡಿರುವುದು ಕಾಂಗ್ರೆಸ್ ಪಕ್ಷ, ಇದರಿಂದ ಬಿಜೆಪಿ ಮುಖಂಡರು ಅವರ ಎದುರು ಸಲಾಂ ಹೊಡೆಯುವಂತೆ ಮಾಡಿದ್ದೇವೆ ಎಂದಿರುವುದು ಸ್ಪೀಕರ್ ಹುದ್ದೆಗೆ ಮಾಡಿದ ಅವಮಾನ. ಅತ್ಯಂತ ಗೌರವಯುತವಾದ ಸಭಾಧ್ಯಕ್ಷ ಹುದ್ದೆಯ ಗೌರವಕ್ಕೆ ತಮ್ಮ ರಾಜಕೀಯ ಲಾಭಕ್ಕಾಗಿ ಧಕ್ಕೆ ತಂದಿರುವುದು ಅತಿರೇಕದ ಪರಮಾವಧಿಯಾಗಿದೆ. ರಾಜಕೀಯ ಲಾಭ ಪಡೆದುಕೊಳ್ಳಲು ಸಾಂವಿಧಾನಿಕ ಹುದ್ದೆಯ ಗೌರವಕ್ಕೆ ಧಕ್ಕೆ ತಂದಿರುವ ಸಚಿವ ಜಹೀರ್ ಅಹ್ಮದ್‌ರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಮತ್ತು ಸಭಾಧ್ಯಕ್ಷ ಯು.ಟಿ. ಖಾದರ್ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ನೂತನ ಶಿಕ್ಷಣ ನೀತಿ ಜಾರಿಗೊಳಿಸಿದ್ದು ನಮ್ಮರಾಜ್ಯದಲ್ಲೂ ಸಹ ಈ ನೀತಿ ಅಳವಡಿಸಿಕೊಳ್ಳಲಾಗಿತ್ತು. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೂತನ ಶಿಕ್ಷಣ ನೀತಿ ರದ್ದುಗೊಳಿಸಿ, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿದೆ. ಆದರೆ ನೂತನ ಶಿಕ್ಷಣ ನೀತಿಯನ್ನೇ ಪುನಃ ಜಾರಿಗೊಳಿಸಬೇಕೆಂದು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ತಪ್ಪು ನಡೆಯುತ್ತಿರುವುದನ್ನು ಗಮನಿಸಿದರೂ ಅಸಹಾಯಕರಾಗಿ ನಿಂತು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಬೇಕು. ತಾಲೂಕಿನಲ್ಲಿ ಅಭಿವೃದ್ಧಿಯ ಕಾರ್ಯಗಳು ಚುರುಕುಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಬಿಜೆಪಿ ಪ್ರಮುಖರಾದ ಮಾರುತಿ ನಾಯ್ಕ, ತಿಮ್ಮಪ್ಪ ಹಿತ್ಲಕೊಪ್ಪ, ಗುರುರಾಜ್ ಶಾನಭಾಗ್, ನಂದನ ಬೋರ್ಕರ್ ರಾಘವೇಂದ್ರ ಶಾಸ್ತ್ರಿ ಮತ್ತಿತರರು ಇದ್ದರು.