ಸಾರಾಂಶ
ಬಾಗಲಕೋಟೆ : ಸಚಿವ ಜಮೀರ್ ಅಹ್ಮದ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕರಿಯ ಕುಮಾರಸ್ವಾಮಿ’ ಎಂದಿದ್ದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತನ್ಮೂಲಕ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಕ ಸಿದ್ದರಾಮಯ್ಯ ಕೂಡ ಜಮೀರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮುಖ್ಯಮಂತ್ರಿಗಳು ಮಾತನಾಡಿದರು. ಜಮೀರ್ ಅವರ ‘ಕರಿಯ ಕುಮಾರಸ್ವಾಮಿ’ ಹೇಳಿಕೆಗೆ ಇದೇ ಮೊದಲ ಬಾರಿಗೆ ಅತೃಪ್ತಿ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಜಮೀರ್ ಅಹ್ಮದ್ ಆ ರೀತಿ ಹೇಳಿಕೆ ಕೊಡಬಾರದಾಗಿತ್ತು. ಅವರದ್ದು ಏನೇ ಪ್ರೀತಿ, ವಿಶ್ವಾಸ ಇರಲಿ. ಹಾಗೆ ಹೇಳಬಾರದಿತ್ತು. ಹೇಳಿದ್ದಾರೆ, ಅದು ತಪ್ಪು ಎಂದರು.
ಕುಮಾರಸ್ವಾಮಿ ಸಹ ಜಮೀರ್ ಬಗ್ಗೆ ಕೊಚ್ಚೆ ಎಂದು ಹೇಳಿದ್ದಾರೆ, ಅದು ತಪ್ಪಲ್ಲವೇ? ಎಂದು ಪ್ರಶ್ನಿಸಿದರು. ಅವರ ಹೇಳಿಕೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವುದೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಸಿಎಂ, ಉಪಚುನಾವಣೆಗಳಲ್ಲಿ ಮೂರೂ ಕಡೆ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.