ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಜೀರೋ ಆ್ಯಕ್ಸಿಡೆಂಟ್ ಸಾಧಿಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಹೇಳಿದರು.
ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಜೀರೋ ಆ್ಯಕ್ಸಿಡೆಂಟ್ ಸಾಧಿಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಹೇಳಿದರು.
ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ, ಭದ್ರತಾ ಮತ್ತು ಜಾಗ್ರತ ಇಲಾಖೆ ಸಹಯೋಗದೊಂದಿಗೆ ಕಾರ್ಮಿಕರ ಪ್ರಕರಣ ನಿರ್ವಹಣೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಹಾಗೂ ಅಪಘಾತ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಜಾಗ್ರತೆಯಿಂದ ಕೆಲಸ ಮಾಡಬೇಕು. ದಿನನಿತ್ಯದ ಕೆಲಸ ಕಾರ್ಯಗಳನ್ನು ಜವಾಬ್ದಾರಿ ಹಾಗೂ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಂಸ್ಥೆಯು ದಿನನಿತ್ಯದ ಬಸ್ ಕಾರ್ಯಾಚರಣೆಯಲ್ಲಿ ಜೀರೋ ಆ್ಯಕ್ಸಿಡೆಂಟ್ ಸಾಧಿಸಬೇಕೆಂಬುದು ನಮ್ಮ ಗುರಿ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ನಿರ್ದೇಶಕ ಮಂಜುನಾಥ ಘಾಟೆ ಮಾತನಾಡಿ, ಸಾರಿಗೆ ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯಲ್ಲಿ ಸುರಕ್ಷತೆ ಹಾಗೂ ರಕ್ಷಣೆಯು ಬಹಳ ಮುಖ್ಯ. ಇಂಥ ಕಾರ್ಯಕ್ರಮಗಳಿಗೆ ತಮ್ಮ ವಿವಿಯಿಂದ ಸಹಕಾರ ಇದ್ದೇ ಇರುತ್ತದೆ ಎಂದರು.ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಹಾಗೂ ಮುಖ್ಯ ಭದ್ರತಾ ಅಧಿಕಾರಿ ಗಣೇಶ ರಾಠೋಡ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ ಎಸ್.ಜಿ., ಕಾನೂನು ಅಧಿಕಾರಿ ನರಸಿಂಹ ವರ್ಮಾ, ಸಿಡಬ್ಲೂಸಿ ಸದಸ್ಯೆ ನೂರಜಹಾನ ಕಿಲ್ಲೇದಾರ, ಪ್ಯಾನಲ್ ಅಡ್ವೋಕೇಟ್ ಎಚ್.ಆರ್. ರೇಣುಕಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿಷಯಗಳನ್ನು ಮಂಡಿಸಿದರು.
ಪ್ರಶಂಸನಾ ಪತ್ರ:2025-26ನೇ ಸಾಲಿನಲ್ಲಿ 2026ರ ಜನವರಿ 16ರಿಂದ ಫೆ.15ರ ವರೆಗೆ ನಡೆದ ಇಂಧನ ಉಳಿತಾಯ ಮಾಸಿಕದಲ್ಲಿ ಅತಿ ಹೆಚ್ಚು ಕೆಎಂಪಿಎಲ್ ಉಳಿಸಿ ಸಾಧನೆ ಮಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಮತ್ತು ಪ್ರಸಂಶನಾ ಪತ್ರ ನೀಡಿ ಪುರಸ್ಕರಿಸಲಾಯಿತು.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ - ಪ್ರಥಮ ಸ್ಥಾನ ಪಡೆದರೆ, ಬೆಳಗಾವಿ ವಿಭಾಗದ ಕೆಂಪಣ್ಣ ಗುಡೆನ್ನವರ ದ್ವಿತೀಯ, ಉತ್ತರ ಕನ್ನಡ ವಿಭಾಗದ ಬಸವರಾಜ ಅಮ್ಮನವರ ತೃತೀಯ ಸ್ಥಾನ ಪಡೆದರು.ವಿಭಾಗೀಯ ತ್ರಾಂತಿಕ ಶಿಲ್ಪಿಗಳ ವಿಭಾಗದಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ದೀಪಕ ಜಾಧವ ಪ್ರಥಮ, ಬೆಳಗಾವಿ ವಿಭಾಗದ ನಿತೀನ ಕೆ. ಗಡದೆ ದ್ವಿತೀಯ, ಉತ್ತರ ಕನ್ನಡ ವಿಭಾಗದ ಚಂದ್ರಶೇಖರ ಲೋಖಂಡೆ - ತೃತೀಯ ಸ್ಥಾನ ಪಡೆದಿದ್ದಾರೆ.
ಘಟಕ ವ್ಯವಸ್ಥಾಪಕ ವಿಭಾಗದಲ್ಲಿ ಬೆಳಗಾವಿ 2ನೆಯ ಘಟಕದ ವಿಜಯಕುಮಾರ ಕುಮಟಳ್ಳಿ ಪ್ರಥಮ, ಹುಬ್ಬಳ್ಳಿ ಗ್ರಾಮಾಂತರ 3ನೆಯ ಘಟಕದ ವಿನೋದ ಅಮ್ಮಣಗಿ ದ್ವಿತೀಯ, ಅನಿಲಕುಮಾರ ಎಸ್. ಹಳ್ಳದ ತೃತೀಯ ಸ್ಥಾನ ಪಡೆದಿದ್ದಾರೆ.ಅಪಘಾತ ರಹಿತ:
2025-26ನೇ ಸಾಲಿನಲ್ಲಿ ಯಾವುದೇ ಮಾರಣಾಂತಿಕ ಅಪಘಾತ ದಾಖಲಿಸದ 16 ಘಟಕಗಳಿಗೆ ನಗದು ಪುರಸ್ಕಾರ ಹಾಗೂ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು.ಜಮಖಂಡಿ, ಗುಳೇದಗುಡ್ಡ, ಹುನಗುಂದ, ಧಾರವಾಡ, ದಾಂಡೇಲಿ, ಧಾರವಾಡ ನಗರ, ಹಾವೇರಿ, ಬ್ಯಾಡಗಿ, ಸಂಕೇಶ್ವರ, ರಾಯಬಾಗ, ಹುಕ್ಕೇರಿ, ಹುಬ್ಬಳ್ಳಿ ಘಟಕ-3, ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ಬೆಳಗಾವಿ ಘ-2. ಇವರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು.