ರಾಜ್ಯದಲ್ಲಿ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ರಾಜ್ಯದಲ್ಲಿ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹಳೇ ಬಸ್‌ ನಿಲ್ದಾಣದಿಂದ ಎಂಡಿಸಿಸಿ ಸರ್ಕಲ್‌ ಮೂಲಕ ತಾಲೂಕು ಕಚೇರಿಗೆ ತೆರಳಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕಾರ್ಯಕರ್ತರು ಮೊಳಗಿಸಿದರು.

ನಂತರ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್‌ ಮಾತನಾಡಿ, ಸ್ಥಳೀಯ ಶಾಸಕರು ಕೆರೆಗಳಿಗೆ ನೀರು ತುಂಬಿಸಲು ವಿಫಲರಾಗಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಖಾತೆಗೆ ಬಂದಿಲ್ಲ ಮೊದಲು ಹಣ ಹಾಕಿಸಿ ಎಂದು ಒತ್ತಾಯಿಸಿದರು.

ಶಾಸಕರು ಬಿಜೆಪಿಗರನ್ನು ವಯಕ್ತಿತವಾಗಿ ಮಾತನಾಡುತ್ತಿದ್ದಾರೆ. ಅದನ್ನು ಮೊದಲು ಬಿಡಬೇಕು. ಪಟ್ಟಣ ಗೆರೆ ಶೆಡ್‌ ಎಂದು ನನ್ನ ಟ್ರ್ಯಾಕ್ಟರ್‌ ಶೋ ರೂಂ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ಈ ನಡವಳಿಕೆ ಬಿಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿ, ಗ್ಯಾರಂಟಿ ಹಿಡಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಇದು ಇದೀಗ ರಾಜ್ಯದ ಜನರಿಗೂ ಅರ್ಥವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸ್ಥಳೀಯ ಶಾಸಕರು ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ. ಶಾಸಕರಾದ ಬಳಿಕ ಕೆರೆಗಳಿಗೆ ನೀರು ತುಂಬಿಸಿ ಹರಿಸಲಿಲ್ಲ. ತಾಂತ್ರಿಕ ದೋಷದ ನೆಪದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಪಂಪ್ ಹೌಸ್‌ಗೆ ಭೇಟಿ ನೀಡಿ ಪ್ರಚಾರ ಪಡೆದಿದ್ದೇ ಅವರ ಎರಡೂವರೆ ವರ್ಷದ ಸಾಧನೆ ಎಂದು ಗೇಲಿ ಮಾಡಿದರು.

ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ,ಕೆರೆಗಳಿಗೆ ನೀರು ತುಂಬಿಸಲಿಲ್ಲ.ಗೃಹ ಲಕ್ಷ್ಮೀ ಹಣ ಬಂದಿಲ್ಲ.ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ.ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ನೀಡುತ್ತಿಲ್ಲ.ರೈತರಿಗೆ ಸಬ್ಸಡಿ ಸಿಗುತ್ತಿಲ್ಲ.ವಾಲ್ಮೀಕಿ ನಿಗಮದಲ್ಲಿ ಹಣವಿಲ್ಲ.ಎಸ್‌ಸಿ,ಎಸ್ ಟಿ ಮೀಸಲು ಅನುದಾನ ಬರುತ್ತಿಲ್ಲ,ರೈತರಿಗೆ ಸಾಗುವಳಿ ಕೊಡುತ್ತಿಲ್ಲ.ವಿದ್ಯುತ್‌ ಸಂಪರ್ಕ ಪಡೆಯಲು ಲಕ್ಷಾಂತರ ಹಣ ಕಟ್ಟಬೇಕು ಇಷ್ಟೆಲ್ಲ ಅದ್ವಾನಗಳ ನಡುವೆ ರಾಜ್ಯ ಸರ್ಕಾರ ಬದುಕಿದೆಯಾ? ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಡಿ.೧ ಅಥವಾ ೨ ರೊಳಗೆ ಕೆರೆಗಳಿಗೆ ನೀರು ತುಂಬಿಸದಿದ್ದರೆ ರೈತರು ಸುಮ್ಮನಿರುವುದಿಲ್ಲ.ಮುಂದಿನ ಹೋರಾಟವನ್ನು ಸರ್ಕಾಋ ಹಾಗೂ ಶಾಸಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಶೀಘ್ರವಾಗಿ ಸ್ಪಂದಿಸಬೇಕುಎಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ,ರೈತರ ಸಮಸ್ಯೆ ಹಾಗೂ ನಾಗರೀಕರ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ರೈತರೇ ರಾಜ್ಯ ಸರ್ಕಾರಕ್ಕೆ ಬುದ್ದಿ ಕಲಿಸುತ್ತಾರೆ ಎಂದರು.

ಬಿಜೆಪಿಗರಿಗೆ ತೊಂದರೆಯಾದ್ರೆ ಪೊಲೀಸರು, ಶಾಸಕರೇ ಜವಾಬ್ದಾರಿ:

ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಬಗ್ಗೆ ಬಿಜೆಪಿಗರು ಟೀಕಿಸಿದ್ರೆ ಕೊಲೆ ಬೆದರಿಕೆ, ಟಿಪ್ಪರ್‌ ಹರಿಸ್ರೀನಿ ಎಂಬ ಬೆದರಿಕೆ ಬಂದಿವೆ, ಮುಂದೇನಾದ್ರೂ ಬಿಜೆಪಿಗರ ಅನಾಹುತವಾದ್ರೆ ಪೊಲೀಸರು ಹಾಗೂ ಶಾಸಕರೇ ಜವಬ್ದಾರಿ ಹೊರ ಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕಾಮೆಂಟ್‌ಗೆ ಈ ರೀತಿಯಾಗಿ ಶಾಸಕರೇ ಬೆದರಿಕೆ ಹಾಕ್ತಾರೆ ಅಂದ್ಮೇಲೆ ಬಿಜೆಪಿಗರಿಗೇನಾದರೂ ತೊಂದರೆಯಾದರೆ ನೀವೇ ಹೊಣೆ ಯಲ್ವ?ಇದು ಪೊಲೀಸರಿಗೂ ದೊಡ್ಡ ಸವಾಲು ಎಂದರು.

ಟಿಪ್ಪರ್‌ ಹಾವಳಿ:

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಟಿಪ್ಪರ್‌ ಗಳ ಹಾವಳಿ ಮಿತಿ ಮೀರಿದೆ. ನಮ್ಮ ಕಾಲದಲ್ಲಿ ಇಷ್ಟಿರಲಿಲ್ಲ. ಈಗ ಮಿತಿ ಮೀರಿದ ವೇಗದಲ್ಲಿರುತ್ತವೆ.ಮಾದಾಪಟ್ಟಣ ಗೇಟ್‌ ಬಳಿ ಮೂವರ ಪ್ರಾಣ ಹೋಗಿದೆ, ಮುಂದೆ ಹೀಗಾಗದಂತೆ ಪೊಲೀಸರು ಕ್ರಮ ಜರುಗಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ಸೋಮಶೇಖರ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ, ಗ್ರಾಪಂ ಅಧ್ಯಕ್ಷರಾದ ನಂಜಪ್ಪ,ಶಿವಣ್ಣನಾಯಕ, ತಾಪಂ ಮಾಜಿ ಸದಸ್ಯ ಎಸ್.ಎಂ.ವೀರಪ್ಪ, ಬಿಜೆಪಿ ಮುಖಂಡರಾದ ಕಲ್ಲಹಳ್ಳಿ ಮಹೇಶ್‌, ಗರನಗಹಳ್ಳಿ ಮಹೇಂದ್ರ, ಮಂಚಹಳ್ಳಿ ಬಾಬು, ಅರೇಪುರ ಮಹದೇವಕುಮಾರ್‌, ಮಂಗಳಮ್ಮ, ಶಿವಪುರ ಮಂಜು, ಮಂಜುನಾಥ್‌, ನಗೇಂದ್ರ ಸೇರಿದಂತೆ ಹಲವರಿದ್ದರು.