ಸಾರಾಂಶ
ಶೂನ್ಯ ಶಕ್ತಿ ಶೀತಲ ಘಟಕದಿಂದ ತಂಪಾದ ವಾತಾವರಣವನ್ನು ಸೃಷ್ಟಿಸುವ ಒಂದು ಸರಳ ತಂತ್ರಜ್ಞಾನವನ್ನು ರೈತರು ಸುಲಭವಾಗಿ ಬಳಸಬಹುದು
ಕನ್ನಡಪ್ರಭ ವಾರ್ತೆ ತಿಪಟೂರು
ಹಳ್ಳಿಗಳಲ್ಲಿ ಬಹುತೇಕ ರೈತರು ಬೆಳೆದ ಹಣ್ಣು, ತರಕಾರಿ ಹಾಗೂ ಬಿತ್ತನೆ ಬೀಜಗಳನ್ನು ಸರಿಯಾಗಿ ಶೇಖರಿಸಿಕೊಳ್ಳಲು ಉತ್ತಮ ವ್ಯವಸ್ಥೆ ಇಲ್ಲದೆ ಅವು ಹಾಳಾಗುತ್ತಿದ್ದು, ಬಿಸಿಲು ಅಧಿಕವಾದ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಲಿದೆ. ಇದಕ್ಕೆ ಪರಿಹಾರವಾಗಿ ಶೂನ್ಯ ಶಕ್ತಿ ಶೀತಲ ಘಟಕದಿಂದ ತಂಪಾದ ವಾತಾವರಣವನ್ನು ಸೃಷ್ಟಿಸುವ ಒಂದು ಸರಳ ತಂತ್ರಜ್ಞಾನವನ್ನು ರೈತರು ಸುಲಭವಾಗಿ ಬಳಸಬಹುದು ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆಹಾರ ವಿಜ್ಞಾನಿ ಡಾ. ಪಿ.ಬಿ. ಸಿಂಧು ತಿಳಿಸಿದರು. ತಾಲೂಕಿನ ಶಿವಪುರ ಗ್ರಾಮದಲ್ಲಿ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶೂನ್ಯ ಶಕ್ತಿ ಶೀತಲ ಘಟಕ ನಿರ್ಮಾಣದ ಮಾದರಿಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ರೈತರಿಗೆ ಘಟಕವನ್ನು ಕಟ್ಟಲು ಹೆಚ್ಚಿನ ಹಣದ ಅಗತ್ಯವಿಲ್ಲ. ಸುಮಾರು ಒಂದರಿಂದ ಎರಡು ಸಾವಿರ ರು.ಒಳಗೆ ನಿರ್ಮಿಸಬಹುದು. ಇದರ ಮೇಲೆ ತಂಪು ತಡೆಗಟ್ಟಲು ಒದ್ದೆಯಾದ ಗೋಣಿಚೀಲದ ಹೊದಿಕೆಯನ್ನು ಹಾಕುತ್ತಾರೆ. ಇದನ್ನು ಮನೆಯ ಹಿತವಾದ ಪ್ರದೇಶದಲ್ಲಿ ಅಥವಾ ಮರದ ನೆರಳಿನಲ್ಲಿ ನಿರ್ಮಿಸಬೇಕು. ವಿದ್ಯುತ್ ಇಲ್ಲದ, ಶೀತಗೃಹ ಸಿಗದ, ಹವಾಮಾನ ಬದಲಾಗುವ ಗ್ರಾಮೀಣ ಪ್ರದೇಶಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶೂನ್ಯ ಶಕ್ತಿ ಶೀತಲ ಘಟಕ ಸರಳ ತಂತ್ರಜ್ಞಾನ ರೈತರಿಗೆ ಅನುಕೂಲವಾಗಲಿದೆ ಎಂದರು. ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ವಿ. ಗೋವಿಂದಗೌಡ ಮಾತನಾಡಿ ಶೀತಲ ಘಟಕವನ್ನು ಇಟ್ಟಿಗೆ, ಮರಳು ಮತ್ತು ನೀರು ಬಳಸಿಕೊಂಡು ತಯಾರಿಸಲಾಗುತ್ತದೆ. ಇದರಲ್ಲಿ ಯಾವುದೇ ವಿದ್ಯುತ್ ಉಪಕರಣಗಳು ಬೇಕಾಗಿಲ್ಲ. ಇದು ನೈಸರ್ಗಿಕವಾಗಿ ತಂಪು ನೀಡುವ ಒಂದು ಗೂಡು. ಎರಡು ಇಟ್ಟಿಗೆ ಗೋಡೆಯ ನಡುವೆ ಮರಳು ತುಂಬಲಾಗುತ್ತದೆ ಮತ್ತು ಇಟ್ಟಿಗೆಯ ಮೇಲೆ ಪ್ರತಿದಿನ ನೀರು ಹಾಕಲಾಗುತ್ತದೆ. ಈ ನೀರು ತೇವವಾಗಿ, ಗಾಳಿಯಿಂದ ತಣ್ಣನೆಯ ವಾತಾವರಣ ನಿರ್ಮಿಸುತ್ತದೆ. ಈ ರಚನೆಯೊಳಗೆ ತರಕಾರಿ ಅಥವಾ ಹಣ್ಣುಗಳನ್ನು ಇರಿಸಿದರೆ ಅವುಗಳನ್ನು ಹೆಚ್ಚು ದಿನ ಶೇಖರಿಸಿಕೊಳ್ಳಬಹುದು. ಈ ತಂಪಿನಲ್ಲಿ ತರಕಾರಿ, ಹಣ್ಣುಗಳು ಹತ್ತಾರು ದಿನಗಳವರೆಗೆ ತಾಜಾವಾಗಿರುತ್ತದೆ. ಈ ರೀತಿ ಶೇಖರಿಸಿದ ಬೆಳೆಗಳನ್ನು ರೈತರು ಮಾರುಕಟ್ಟೆಗೆ ತಮ್ಮ ಇಚ್ಛೆಯ ಸಮಯದಲ್ಲಿ ತರುವ ಮೂಲಕ ಉತ್ತಮ ಬೆಲೆ ಪಡೆಯಬಹುದು ಎಂದರು. ಈ ಸಂದರ್ಭದಲ್ಲಿ ಸುಮಾರು 15ಶಾಲಾ ವಿದ್ಯಾರ್ಥಿಗಳು ಹಾಗೂ 35 ಜನ ರೈತರು ಭಾಗವಹಿಸಿದ್ದರು.