ಸಾರಾಂಶ
₹56 ಸಾವಿರ ಕೋಟಿಯನ್ನು ವಿವಿಧ ಯೋಜನೆ ಮೂಲಕ ಬಡವರಿಗೆ, ಜನಸಾಮಾನ್ಯರಿಗೆ ತಲುಪಿಸಿ ನುಡಿದಂತೆ ನಡೆದಿದ್ದೇವೆ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದರು.
ಹೊನ್ನಾವರ: ಮೋದಿ ನೋಡಿ ವೋಟ್ ಹಾಕಿ ಎನ್ನುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಶಾಸಕರಾಗಿದ್ದವರು, ಸ್ಪೀಕರ್ ಆದಂತವರು. ಆದರೂ ಜಿಲ್ಲೆಯಲ್ಲಿ ಇವರ ಅಭಿವೃದ್ಧಿ ಶೂನ್ಯ. ಇಂಥವರನ್ನೆಲ್ಲಾ ಆಯ್ಕೆ ಮಾಡಿದರೆ ಅಭಿವೃದ್ಧಿ ಎನ್ನುವುದು ಕನಸಿನ ಮಾತು. ಅದಕ್ಕಾಗಿ ಅಭಿವೃದ್ಧಿ ಪರ ಚಿಂತನೆ, ಜನಪರ ಕಾಳಜಿಯುಳ್ಳ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸಿ ಎಂದು ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ಖರ್ವಾ ಗ್ರಾಪಂ ವ್ಯಾಪ್ತಿಯ ಸಿದ್ಧಿವಿನಾಯಕ ದೇವಸ್ಥಾನ ಸಭಾಭನಲ್ಲಿ ಭಾನುವಾರ ಸಾಯಂಕಾಲ ನಡೆದ, ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ವಿಧಾನಸಭಾ ಚುನಾವಣಾ ಸಮಯದಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಜನರಿಗೆ ಹೇಳಿದಾಗ ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಾರೆ ಎಂದು ಬಿಜೆಪಿಗರು ಲೇವಡಿ ಮಾಡಿದ್ದರು. ಅವರ ಹಾಗೇ ಒಮ್ಮೆ ಅಧಿಕಾರ ಕೊಡಿ. ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದು ಮೋಸ ಮಾಡಿಲ್ಲ. ₹56 ಸಾವಿರ ಕೋಟಿಯನ್ನು ವಿವಿಧ ಯೋಜನೆ ಮೂಲಕ ಬಡವರಿಗೆ, ಜನಸಾಮಾನ್ಯರಿಗೆ ತಲುಪಿಸಿ ನುಡಿದಂತೆ ನಡೆದಿದ್ದೇವೆ ಎಂದರು.ಈ ವೇಳೆ ಸಚಿವರಿಂದ ಮಹಿಳೆಯರಿಗೆ ಕಾಂಗ್ರೆಸ್ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು. ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಖರ್ವಾ ಗ್ರಾಪಂ ಅಧ್ಯಕ್ಷ ಶ್ರೀಧರ್ ನಾಯ್ಕ, ಜಿಪಂ ಮಾಜಿ ಸದಸ್ಯರಾದ ಕೃಷ್ಣ ಗೌಡ, ಪುಷ್ಪಾ ನಾಯ್ಕ, ಮುಖಂಡರಾದ ಚಂದ್ರಕಾಂತ ಕೊಚರೇಕರ್, ಚಂದ್ರಶೇಖರ ಗೌಡ,ಅಣ್ಣಪ್ಪ ನಾಯ್ಕ, ಖಲೀಲ್ ಶೇಖ್, ಉಷಾ ನಾಯ್ಕ ಉಪಸ್ಥಿತರಿದ್ದರು.