ರಾಜ್ಯದಲ್ಲಿ ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಮಡಿಕೇರಿ: ರಾಜ್ಯದಲ್ಲಿ ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಭಾನುವಾರ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನೀವೆಲ್ಲ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು. ಅದರ ಮೂಲಕ ಎಲ್ಲ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕರೆ ನೀಡಿದರು.ಗ್ರಾಮೀಣಾಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಭಾರತ್ ಜೋಡೋ ಯುವ ಘಟಕವನ್ನು ನಿರ್ಮಾಣ ಮಾಡಲಾಗುವುದು. ಪ್ರತೀ ಪಂಚಾಯಿತಿಗೆ 10 ಲಕ್ಷ ರೂ. ಅನುದಾನ ನೀಡಲಾಗುವುದು. ಇದು ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಭಾಗಮಂಡಲದಲ್ಲೇ ಉಳಿದ ಮುಖ್ಯಮಂತ್ರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆದರೆ ತಲಕಾವೇರಿಗೆ ಅವರ ಪತ್ನಿ ಉಷಾ ಶಿವಕುಮಾರ್ ಮಾತ್ರ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಡಿ.ಕೆ. ಶಿವಕುಮಾರ್ ಅವರು ಭಾಗಮಂಡದಲ್ಲಿ ಉಳಿದುಕೊಂಡರು. ಮುಖ್ಯಮಂತ್ರಿಗಳು ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಆತಂಕದಿಂದ ತಲ ಕಾವೇರಿಗೆ ಅವರು ಭೇಟಿ ನೀಡಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ.

ತಲಕಾವೇರಿಯಿಂದ ಪೂಜೆ ಸಲ್ಲಿಸಿದ ಬಳಿಕ ಅವರ ಪತ್ನಿ ಹಿಂದಿರುಗಿದ ಬಳಿಕ ರಸ್ತೆ ಮಾರ್ಗವಾಗಿ ಮಡಿಕೇರಿಗೆ ತೆರಳಿ, ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಂತರ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಲಪಾಡ್ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರು ತೆರಳಿದರು.ವಿವಾಹಕ್ಕೆ ಬಾರದ ಕೇರಳ ಸಿಎಂ!: ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರ ವಿವಾಹ ಸಮಾರಂಭಕ್ಕೆ ಕೇರಳ ಮುಖ್ಯಮಂತ್ರಿ ಸತೀಶನ್ ಅವರ ಭೇಟಿ ನಿಗದಿಯಾಗಿತ್ತು. ಹೆಲಿಕಾಪ್ಟರ್ ಮೂಲಕ ಅವರು ಆಗಮಿಸಬೇಕಿತ್ತು. ಆದರೆ ಕೊಡಗಿನಲ್ಲಿ ಮಳೆ ವಾತಾವರಣದ ಪರಿಣಾಮ ಹೆಲಿಕಾಪ್ಟರ್ ಹಿಂತಿರುಗಿದೆ ಎಂದು ಹೇಳಲಾಗುತ್ತಿದೆ.ಮಳೆ ನಡುವೆಯೇ ಡಿಕೆ ಆಗಮನ!: ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಳೆ ನಡುವೆ ಭಾಗಮಂಡಲಕ್ಕೆ ಆಗಮಿಸಿದರು. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಡಿ.ಕೆ. ಅವರ ಆಗಮನ ಸಂದರ್ಭ ಜೋರಾಗಿ ಸುರಿಯಿತು. ಮಳೆಯ ನಡುವೆಯೇ ಡಿ.ಕೆ. ಶಿವಕುಮಾರ್ ಆಗಮಿಸಿ ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.