ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು ನಂತರ ಜಾನಪದದೆಡೆಗೆ ಆಸಕ್ತಿ ಬೆಳೆಸಿಕೊಂಡವರು.
ಕನ್ನಡಪ್ರಭ ವಾರ್ತೆ ಮೈಸೂರು
ಜಾನಪದ, ಕಥೆ, ನಾಟಕ ಸೇರಿದಂತೆ ಎಲ್ಲ ರೀತಿಯ ಸಾಹಿತ್ಯ ಪ್ರಕಾರಗಲ್ಲೀ ಅಕ್ಷರ ಕೃಷಿ ಮಾಡಿರುವ ಡಾ.ಎಚ್.ಜೆ. ಲಕ್ಕಪ್ಪಗೌಡ ಅವರು ಸಾಹಿತ್ಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಿಳಿಸಿದರು.ನಗರದ ಯುವರಾಜ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ್ದ ಡಾ.ಎಚ್.ಜೆ. ಲಕ್ಕಪ್ಪಗೌಡ ಅವರ ಬದುಕು- ಬರಹ ಸಾಹಿತ್ಯ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು ನಂತರ ಜಾನಪದದೆಡೆಗೆ ಆಸಕ್ತಿ ಬೆಳೆಸಿಕೊಂಡವರು. ಜಾನಪದ ವಿಚಾರ ಸಂಕಿರಣಗಳು ಮತ್ತು ಮೇಳಗಳ ಆಯೋಜನೆ ಮೂಲಕ ತೆರೆಮರೆಯ ಜಾನಪದ ಕಲಾವಿದರನ್ನು ಬೆಳಕಿಗೆ ತಂದರು. ಕನ್ನಡಭಾರತಿ ನಿರ್ದೇಶಕರಾಗಿ, ಹಂಪಿ ಕನ್ನಡ ವಿವಿ ಕುಲಪತಿಯಾಗಿದ್ದರು ಎಂದರು.ಯುವರಾಜ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ ಮಾತನಾಡಿ, ಕಥಾ ಸಂಕಲನ, ಕಾವ್ಯ, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ನಾಟಕ, ವಿಮರ್ಶೆ ಸೇರಿದಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೆಲಸ ಮಾಡಿರುವ ಡಾ. ಲಕ್ಕಪ್ಪಗೌಡ ಅವರನ್ನು ಕೇವಲ ಜಾನಪದ ಕ್ಷೇತ್ರಕ್ಕೆ ಸೀಮಿತಗೊಳಿಸಲಾಗಿದೆ. ಪ್ರತಿಭಾವಂತ ಹಿರಿಯ ಸಾಹಿತಿಗೆ ಸಲ್ಲಬೇಕಾದ ಗೌರವ ಇವರಿಗೂ ಸಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಡಾ.ಎಚ್.ಜೆ. ಲಕ್ಕಪ್ಪಗೌಡ ಹಾಗೂ ಸೃಜನಶೀಲ ಸಾಹಿತ್ಯ ಕುರಿತು ಸಂಶೋಧನಾ ವಿದ್ಯಾರ್ಥಿನಿ ಎಸ್.ವಿ. ಪೂಜಾ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್ ಮೊದಲಾದವರು ಇದ್ದರು.