ಮೂರು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ

| Published : Apr 23 2025, 12:38 AM IST

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಇಚ್ಛಾಶಕ್ತಿ ಇರಲಿಲ್ಲ. ಇದರಿಂದಾಗಿ ಆಡಳಿತದಲ್ಲಿ ಗೊಂದಲ ಮೂಡಿಸಿ ಹೋಗಿದ್ದಾರೆ. ಆ ಗೊಂದಲವನ್ನು ನಿವಾರಿಸಲಾಗಿದ್ದು, ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ.

ಹುಬ್ಬಳ್ಳಿ: ಮೂರು ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ನಗರದ ಕಾಂಗ್ರೆಸ್‌ ಕಚೇರಿಗೆ ಮಂಗ‍ಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಇಚ್ಛಾಶಕ್ತಿ ಇರಲಿಲ್ಲ. ಇದರಿಂದಾಗಿ ಆಡಳಿತದಲ್ಲಿ ಗೊಂದಲ ಮೂಡಿಸಿ ಹೋಗಿದ್ದಾರೆ. ಆ ಗೊಂದಲವನ್ನು ನಿವಾರಿಸಲಾಗಿದ್ದು, ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರ ಕೇಂದ್ರಿಕೃತ ಅಧಿಕಾರದ ಪರವಾಗಿದ್ದರಿಂದ ಸ್ಥ‍ಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಿಲ್ಲ. ಅವರು ಸೃಷ್ಟಿಸಿದ ಗೊಂದಲ ನಿವಾರಿಸಿದ್ದರಿಂದ ಚುನಾವಣೆ ವಿಳಂಬವಾಗಿದೆ. ಈಗ ಚುನಾವಣೆ ನಡೆಸಲಾಗುವುದು. 8 ತಿಂಗಳ ನಂತರ ಗ್ರಾಪಂ ಚುನಾವಣೆಗಳನ್ನು ನಡೆಸುವುದಾಗಿ ಹೇಳಿದರು.

ಬಿಜೆಪಿಗೆ ನೈತಿಕತೆ ಇಲ್ಲ: ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ರ್‍ಯಾಲಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಲಿನ ಬೆಲೆ ಏರಿಸಿದ್ದೇವೆ ನಿಜ. ಹೆಚ್ಚಿಸಿದ ದುಡ್ಡನ್ನು ಸರ್ಕಾರ ತೆಗೆದುಕೊಳ್ಳುತ್ತಿಲ್ಲ. 4 ರುಪಾಯಿಯನ್ನೂ ಹಾಲು ಉತ್ಪಾದರಿಗೆ ನೀಡುತ್ತಿದ್ದೇವೆ. ವಿದ್ಯುತ್‌ ಬೆಲೆ ಏರಿದೆ. ಆದರೆ, ಬಡವರ ವಿದ್ಯುತ್‌ ಬಿಲ್ ಅನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇದರಿಂದ ಬಡವರಿಗೆ ಹೊರೆಯಾಗುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿದಿದ್ದರೂ ಕೇಂದ್ರ ಸರ್ಕಾರ ತೆರಿಗೆ ಹೆಚ್ಚಿಸಿ ಇಂದನ ಬೆಲೆ ಏರಿಸಿದೆ. ಸಿಲಿಂಡರ್‌ ಬೆಲೆ ಏರಿಸಿದೆ. ಹೀಗಾಗಿ ಬಿಜೆಪಿಗೆ ನೈತಿಕತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಎಲ್ಲ ಕಾಲದಲ್ಲಿಯೂ ಬಡವರ, ಜನಸಾಮಾನ್ಯರ ಪರ ಸರ್ಕಾರ. ಐದು ಗ್ಯಾರೆಂಟಿ ಜಾರಿ ಮಾಡಿ ನುಡಿದಂತೆ ನಡೆದ ಸರ್ಕಾರವಾಗಿದೆ. ಬಿಜೆಪಿಯದ್ದು ಶ್ರೀಮಂತರ ಪರ ಸರ್ಕಾರ. ಶ್ರೀಮಂತರ ಕೋಟ್ಯಂತರ ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡಲಿಲ್ಲ ಎಂದರು.

ಕಾರ್ಯಕರ್ತರಿಗೆ ಅವಕಾಶ: ಇದೇ ವೇಳೆ ಪಕ್ಷದ ಸಭೆಯಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಾಂಗ್ರೆಸ್‌ ಜನಸಾಮಾನ್ಯರ ಪಕ್ಷ. ಪಕ್ಷಕ್ಕಾಗಿ ದುಡಿದವರಿಗೆ ಖಂಡಿತವಾಗಿ ಸ್ಥಾನಮಾನ ದೊರಕುತ್ತದೆ. ಕಾಂಗ್ರೆಸ್‌ ಅಧಿಕಾರದಲ್ಲಿ ಇರಲಿ, ಇರದಿರಲಿ ಜನಸಾಮಾನ್ಯರ ಪರವಾಗಿ ಸದಾಕಾಲ ಕೆಲಸ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜಂಪೀರ್ ಖಾದ್ರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.