ಸಾಮಾಜಿಕ ಜಾಲತಾಣಗಳಲ್ಲಿ ‘ಝೂಂಬಿ’ ಡ್ರಗ್ಸ್ ಸೇವಿಸಿ ವ್ಯಕ್ತಿ ತೂರಾಟ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡಿದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಜಾಲತಾಣಗಳಲ್ಲಿ ‘ಝೂಂಬಿ’ ಡ್ರಗ್ಸ್ ಸೇವಿಸಿ ವ್ಯಕ್ತಿ ತೂರಾಟ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡಿದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ವಿದ್ಯಾರಣ್ಯಪುರದ ಹೇಮಂತ್ ಬಂಧಿತನಾಗಿದ್ದು, ಇತ್ತೀಚೆಗೆ ಯಲಹಂಕ ಸಮೀಪದ ನಿಟ್ಟೆ ಕಾಲೇಜು ಬಳಿಕ ಬಿಹಾರ ಮೂಲದ ಕಾರ್ಮಿಕ ಅರೆಪ್ರಜ್ಞಾವಸ್ಥೆಯಲ್ಲಿದ್ದನ್ನು ಆತ ವಿಡಿಯೋ ಮಾಡಿದ್ದ. ಬಳಿಕ ಬೆಂಗಳೂರಿನಲ್ಲಿ ಝೂಂಬಿ ಡ್ರಗ್ಸ್ ಸೇವಿಸಿ ವ್ಯಕ್ತಿ ತೂರಾಟ ಎಂದು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಆಪ್ ಲೋಡ್ ಮಾಡಿದ್ದ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಡಿಯೋ ಮೂಲ ಪತ್ತೆ ಹಚ್ಚಿದ್ದಾಗ ಸತ್ಯ ಸಂಗತಿ ಗೊತ್ತಾಗಿದೆ. ವೈರಲ್ ಹುಚ್ಚಿಗೆ ವಿಡಿಯೋ ಮಾಡಿ ಈಗ ಹೇಮಂತ್ ಸಂಕಷ್ಟಕ್ಕೀಡಾಗಿದ್ದಾನೆ.
ಖಾಸಗಿ ಕಂಪನಿಯಲ್ಲಿ ಹೇಮಂತ್ ಉದ್ಯೋಗದಲ್ಲಿದ್ದು, ತನ್ನ ಕುಟುಂಬದ ಜತೆ ವಿದ್ಯಾರಣ್ಯಪುದಲ್ಲಿ ಆತ ವಾಸವಾಗಿದ್ದ.ಕ್ಷಮೆ ಕೋರಿದ ಹೇಮಂತ್:
ಏ.7 ರಂದು ಕೆಲಸ ಮುಗಿಸಿ ರಾಜಾನುಕುಂಟೆಗೆ ಹೋಗುತ್ತಿದ್ದೆ. ಆಗ ನಿಟ್ಟೆ ಮೀನಾಕ್ಷಿ ಕಾಲೇಜು ಬಳಿ ಅಪರಿಚಿತ ವ್ಯಕ್ತಿ ನಿಂತ ಜಾಗದಲ್ಲೇ ನಿಂತಿದ್ದನ್ನು ನೋಡಿದೆ. ಕೂಡಲೇ ಆತನ ಅರೆಪ್ರಜ್ಞಾ ಸ್ಥಿತಿ ಬಗ್ಗೆ ವಿಡಿಯೋ ಮಾಡಿ ಝೂಂಬಿ ಡ್ರಗ್ಸ್ ಎಂದು ವೈರಲ್ ಮಾಡಿದ್ದೆ. ನಾನು ತಿಳಿಯದೆ ತಪ್ಪು ಮಾಡಿದ್ದೇನೆ. ಸುಳ್ಳು ಸುದ್ದಿ ಪ್ರಚಾರ ಮಾಡಿದ್ದಕ್ಕೆ ರಾಜ್ಯದ ಜನತೆ ಬಳಿ ಕ್ಷಮೆ ಕೋರುತ್ತೇನೆ ಎಂದು ಹೇಮಂತ್ ಹೇಳಿದ್ದಾನೆ. ಈ ಕ್ಷಮಾಪಣೆ ಹೇಳಿಕೆ ಬಗ್ಗೆ ಆತ ವಿಡಿಯೋ ಹರಿಬಿಟ್ಟಿದ್ದಾನೆ.ವಿಡಿಯೋ ಹಂಚಿದವರಿಗೆ ತನಿಖೆ: ಆಯುಕ್ತರ ಹೇಳಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಝೂಂಬಿ ಡ್ರಗ್ಸ್ ಬಗ್ಗೆ ಸುಳ್ಳು ವಿಡಿಯೋ ಹಂಚಿಕೊಂಡ ಎಲ್ಲರನ್ನು ವಿಚಾರಣೆ ನಡೆಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಈಗಾಗಲೇ ಝೂಂಬಿ ಡ್ರಗ್ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದೇವೆ. ಆತ ಯಾವುದೇ ಡ್ರಗ್ಸ್ ಸೇವಿಸಿಲ್ಲ ಎಂಬುದು ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಸುಳ್ಳು ಸುದ್ದಿ ಪ್ರಚಾರ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸದೆ ಹಂಚಿಕೊಂಡ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುತ್ತೇವೆ. ಆಧಾರ ರಹಿತ ಮಾಹಿತಿ ಪ್ರಚಾರ ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ. ವೈದ್ಯಕೀಯ ವರದಿ ಆಧರಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕು. ಆದರೆ ಸುಖಾಸುಮ್ಮನೆ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಕಲ್ಪನೆ ಮಾಡಿಕೊಂಡು ಪೋಸ್ಟ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ವಿದೇಶದಲ್ಲಿ ಈ ರೀತಿ ಡ್ರಗ್ ಸೇವನೆ ಇದೆ ಎಂದು ಆತ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆದಿದೆ ಎಂದಿದ್ದಾರೆ. ದುನಿಯಾ ವಿಜಯ್, ಭಾಸ್ಕರ್ ರಾವ್‌ಗೆ ತನಿಖೆ ಬಿಸಿ?ಝೂಂಬಿ ಡ್ರಗ್ಸ್ ವಿಡಿಯೋ ಹಂಚಿಕೊಂಡ ಆರೋಪದ ಮೇರೆಗೆ ಚಿತ್ರ ನಟ ದುನಿಯಾ ವಿಜಯ್ ಹಾಗೂ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಮತ್ತು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಜನರಿಗೆ ಪೊಲೀಸರ ತನಿಖೆ ಬಿಸಿ ತಟ್ಟಲಿದೆ ಎನ್ನಲಾಗಿದೆ.