ಯಂತ್ರದಿಂದ ಭತ್ತ ನಾಟಿ ಮಾಡಿದ ಜಿಪಂ ಸಿಇಒ ಕೆ.ಆರ್‌.ನಂದಿನಿ

| Published : Sep 13 2025, 02:04 AM IST

ಯಂತ್ರದಿಂದ ಭತ್ತ ನಾಟಿ ಮಾಡಿದ ಜಿಪಂ ಸಿಇಒ ಕೆ.ಆರ್‌.ನಂದಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಭತ್ತ ನಾಟಿಗೆ ಯಂತ್ರ ಬಳಸಲು ಮಹಿಳೆಯರಿಗೆ ಸಾಧ್ಯವಿಲ್ಲ. ಅವರಿಂದ ಯಂತ್ರವನ್ನು ನಿರ್ವಹಣೆ ಮಾಡಲು ಅಸಾಧ್ಯ ಎಂಬ ಕಲ್ಪನೆಗಳನ್ನು ತೊಡೆದುಹಾಕಬೇಕು. ಮಹಿಳೆಯರೂ ಯಂತ್ರವನ್ನು ಸಮರ್ಥವಾಗಿ ನಿರ್ವಹಣೆ ಮಾಡಬಲ್ಲರು ಎಂಬುದಕ್ಕೆ ನಾನೇ ಸಾಕ್ಷಿ. ಜೊತೆಗೆ ತರಬೇತಿಗೆ ಬಂದಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಧೈರ್ಯ ತುಂಬಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಜಿಪಂ ಸಿಇಒ ಕೆ.ಆರ್‌.ನಂದಿನಿ ಅವರು ಸ್ವತಃ ಭತ್ತ ನಾಟಿ ಮಾಡಿದರು.

ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ವತಿಯಿಂದ ತಾಲೂಕಿನ ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಏರ್ಪಡಿಸಲಾಗಿದ್ದ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದರು. ಭತ್ತ ನಾಟಿಗೆ ಯಂತ್ರ ಬಳಸಲು ಮಹಿಳೆಯರಿಗೆ ಸಾಧ್ಯವಿಲ್ಲ. ಅವರಿಂದ ಯಂತ್ರವನ್ನು ನಿರ್ವಹಣೆ ಮಾಡಲು ಅಸಾಧ್ಯ ಎಂಬ ಕಲ್ಪನೆಗಳನ್ನು ತೊಡೆದುಹಾಕಬೇಕು. ಮಹಿಳೆಯರೂ ಯಂತ್ರವನ್ನು ಸಮರ್ಥವಾಗಿ ನಿರ್ವಹಣೆ ಮಾಡಬಲ್ಲರು ಎಂಬುದಕ್ಕೆ ನಾನೇ ಸಾಕ್ಷಿ. ಜೊತೆಗೆ ತರಬೇತಿಗೆ ಬಂದಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಧೈರ್ಯ ತುಂಬಿದರು.

ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿಗೆ ಕೃಷಿ ಕೂಲಿಕಾರರು ಸರಿಯಾದ ಸಮಯದಲ್ಲಿ ದೊರೆಯುತ್ತಿಲ್ಲ, ಇದರಿಂದ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಇಳುವರಿ ಕಡಿಮೆಯಾಗುತ್ತಿದೆ. ಯಾಂತ್ರೀಕೃತ ವಿಧಾನದ ಭತ್ತ ನಾಟಿಯಿಂದ ಭತ್ತ ನಾಟಿಯ ವೆಚ್ಚ ತಗ್ಗಿಸಬಹುದು. ಕಡಿಮೆ ಸಮಯದಲ್ಲಿ ನಾಟಿ ಕಾರ್ಯ ಮುಗಿಸಬಹುದು ಎಂದರು.

ಕೃಷಿ ಇಲಾಖೆಯ ಸಮನ್ವಯದೊಂದಿಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ನೊಂದಾಯಿತ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಂಟಿ ಕಣ್ಣಿನ ಕಬ್ಬಿನ ಸಸಿ ಮಡಿ ತಯಾರಿಸುವುದು ಹಾಗೂ ಯಂತ್ರ ನಾಟಿ ಸಸಿಮಡಿ ತಯಾರಿಸುವ ಕುರಿತಂತೆ ತರಬೇತಿ ಏರ್ಪಡಿಸಲಾಗಿತ್ತು.

ಯಾಂತ್ರೀಕೃತ ವಿಧಾನದ ಭತ್ತ ನಾಟಿಗೆ ಸಸಿಮಡಿಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಿ, ಅವರಿಂದ ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಸಸಿಗಳನ್ನು ಒದಗಿಸುವ ಕಾರ್ಯ ನಡೆಸಲಾಗುವುದು ಎಂದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್‌.ಅಶೋಕ್, ಸಹಾಯಕ ಕೃಷಿ ನಿರ್ದೇಶಕ ಶ್ರೀಹರ್ಷ ಸೇರಿದಂತೆ ಇತರರಿದ್ದರು.

ನಾಳೆ ಕೆಆರ್‌ಎಸ್ ಕಥನ ಪುಸ್ತಕ ಬಿಡುಗಡೆ: ನಂಜೇಗೌಡ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಸೆ.14ರಂದು ಕೆಆರ್‌ಎಸ್ ಕಥನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಕೃತಿ ಕರ್ತ ಗಣಂಗೂರು ನಂಜೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನುಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸುವರು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪುಸ್ತಕ ಬಿಡುಗಡೆ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಕೃತಿ ಕುರಿತು ಮಾತನಾಡುವರು. ಇದೇ ವೇಳೆ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರನ್ನು ಅಪರ ಜಿಲ್ಲಾಕಾರಿ ಬಿ.ಸಿ.ಶಿವಾನಂದಮೂರ್ತಿ ಸನ್ಮಾನಿಸಿ ಗೌರವಿಸುವರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್. ನವೀನ್‌ಕುಮಾರ್ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜೈಶಂಕರ್ ಇದ್ದರು.ಇಂದಿನಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಸೆಪ್ಟೆಂಬರ್ 13 ರಿಂದ 15 ವರೆಗೆ ಆಯೋಜಿಸಲಾಗಿದೆ.

ಸೆಪ್ಟೆಂಬರ್ 13 ಮತ್ತು 14 ರಂದು ಹಾಸನ ಜಿಲ್ಲೆಯಲ್ಲಿ ಪುಟ್ಬಾಲ್, ಖೋ-ಖೋ, ಕಬ್ಬಡಿ, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್ ಮತ್ತು ಈಜು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 14 ರಂದು ಆರ್ಚರಿ ಮತ್ತು ಫೆನ್ಸಿಂಗ್ ಸ್ಪರ್ಧೆ ಹಾಗೂ ಸೆಪ್ಟೆಂಬರ್ 15 ರಂದು ಕೊಡಗಿನಲ್ಲಿ ಹಾಕಿ, ಯೋಗ ಮತ್ತು ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಂಡ್ಯ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ, ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಭಾಗವಹಿಸುವವರು ಸ್ಪರ್ಧೆ ನಡೆಯುವ ದಿನಾಂಕದಂದು ಬೆಳಗ್ಗೆ 8 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳುವುದು ಹಾಗೂ ಅರ್ಚರಿ, ಫೆನ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೂಡ ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಂಡು ನೇರವಾಗಿ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಬಹುದು.

ವಿಭಾಗ ಮಟ್ಟದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆನ್ ಲೈನ್ ರಿಜಿಸ್ಟ್ರೇಷನ್ ಐಡಿ, ಇತ್ತೀಚಿನ ಎರಡು ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೋಂದಣಿ ಸಮಯದಲ್ಲಿ ಹಾಜರುಪಡಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬ್ಯಾಸ್ಕೆಟ್ ಬಾಲ್ ತರಬೇತುದಾರರಾದ ಭರತ್ ರಾಜ್ ದೂ.ಸಂ:9916644007, ವಾಲಿಬಾಲ್ ತರಬೇತುದಾರರಾದ ಸೋಮಶೇಖರ್, ದೂ.ಸಂ: 9740896699, ಪುಟ್ಬಾಲ್ ತರಬೇತುದಾರ ಸಂಜಯ್ ಕುಮಾರ್ ದೂ.ಸಂ:9739972472 ಮತ್ತು ಕಬ್ಬಡಿ ತರಬೇತುದಾರರಾದ ರೂಪಶ್ರೀ ಜೆ, ದೂ.ಸಂ 7353097540 ಅನ್ನು ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.