ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಧಿಕಾರಿಗಳು ಸಂವಿಧಾನಬದ್ದವಾಗಿ ಜಾತ್ಯತೀತರಾಗಿರಬೇಕು. ಯಾವುದೇ ಪಕ್ಷದ ಪರವಾಗಿ, ಜಾತಿ-ಧರ್ಮದ ಪರವಾಗಿ ವರ್ತಿಸದೇ ವೃತ್ತಿಪರವಾಗಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನಾವು ಬಡವರ ಪಕ್ಷಪಾತಿಗಳಾಗಿರಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ ಎಂದರು. ಏಳೂವರೆ ವರ್ಷ ನಾನು ಮುಖ್ಯಮಂತ್ರಿಯಾಗಿ ಈ ಅವಧಿಯಲ್ಲಿ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಕೆಲಸ ಮಾಡಿದ್ದೇನೆ. ಅಸಮಾನತೆ ಹೋಗಲಾಡಿಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ನಿಸ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಸಮಾಜಮುಖಿಯಾಗಿರುವುದು, ಸಂವಿಧಾನದ ಆಶಯಗಳನ್ನು ಈಡೇರಿಸುವುದು ನಮ್ಮ- ನಿಮ್ಮ ಗುರಿ. ಅಸಮಾನತೆ ತೊಲಗದೆ ಸಮ ಸಮಾಜದ ಸೃಷ್ಟಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಬಹಳ ಮಂದಿಗೆ ಅಧಿಕಾರ ಕೇಂದ್ರಗಳು ಅರ್ಥ ಆಗುವುದಿಲ್ಲ. ಗ್ರಾಮೀಣ ಭಾಗದಲ್ಲಿ ಬದುಕು ಕಳೆದುಕೊಂಡವರು ಜೀವನಕ್ಕಾಗಿ ನಗರಕ್ಕೆ ಬರುತ್ತಾರೆ. ನಮ್ಮಲ್ಲಿರುವ ಶೇ.90 ಹೆಚ್ಚು ಅಧಿಕಾರಿಗಳು ಗ್ರಾಮೀಣ ಭಾಗದಿಂದ ಬಂದವರು. ಗ್ರಾಮೀಣ ಪ್ರದೇಶ ಪ್ರಗತಿ ಆಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಗ್ರಾಮೀಣ ಭಾಗದಿಂದ ಬಂದ ಅಧಿಕಾರಿ ಮತ್ತು ಸಿಬ್ಬಂದಿ ಸ್ಪಂದಿಸದಿದ್ದರೆ ಜನೋದ್ಧಾರ ಸಾಧ್ಯವಿಲ್ಲ. ಹೀಗಾಗಿ, ಅಮಾಯಕ ಜನರನ್ನು ಅಲೆದಾಡಿಸಬೇಡಿ. ಜನರ ಸಮಸ್ಯೆ ಕೇಳಿಸಿಕೊಂಡು ಸಮಸ್ಯೆ ಬಗೆಹರಿಸಿ ಎಂದು ಅವರು ತಿಳಿಸಿದರು.ಅಧಿಕಾರಿಗಳು ಕಚೇರಿಯಲ್ಲೇ ಕೂರದೇ ಸ್ಥಳ ಸಮೀಕ್ಷೆ ಮಾಡಬೇಕು. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋದಾಗ ಅಪರಾಧ ಪತ್ತೆ ಹೆಚ್ಚು ಪರಿಣಾಮಕಾರಿಯಾಗಿ ಆಗುತ್ತದೆ. ಪೊಲೀಸರಿಗೆ ಗೊತ್ತಿಲ್ಲದೆ ಯಾವುದೇ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ ಎಂದರು.ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರು ಮತ್ತು ಎಸ್ಪಿಯನ್ನು ಬದಲಾಯಿಸಿದ ಮೇಲೆ ಜಿಲ್ಲೆಯ ಪರಿಸ್ಥಿತಿ ಸುಧಾರಿಸಿತು. ಹೊಸದಾಗಿ ಬಂದ ಇಬ್ಬರು ಅಧಿಕಾರಿಗಳಿಗೆ ಸಾಧ್ಯವಾಗಿದ್ದು, ಉಳಿದ ಅಧಿಕಾರಿಗಳಿಂದಲೂ ಸಾಧ್ಯವಿದೆ. ಇದಕ್ಕೆ ಅಧಿಕಾರಿಗಳು ವೃತ್ತಿಪರವಾಗಿ, ಸಂವಿಧಾನಬದ್ದವಾಗಿ ಇದ್ದರೆ ಸಾಕು ಎಂದು ಅವರು ಹೇಳಿದರು.
;Resize=(128,128))
;Resize=(128,128))
;Resize=(128,128))