ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಆಯುಷ್ಮಾನ್ ಯೋಜನೆ ಒಂದು ದೊಡ್ಡ ವಂಚನೆ, ನೂರಾರು ನಕಲಿ ರೋಗಿಗಳನ್ನು ತೋರಿಸುವ ಮೂಲಕ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಆಳ್ವಿಕೆಯ ದೆಹಲಿ ರಾಜ್ಯದಲ್ಲಿ ಈಗಾಗಲೇ ಅರವಿಂದ್ ಕೇಜ್ರಿವಾಲ್ ಆರೋಗ್ಯ ಕ್ರಾಂತಿಯನ್ನೇ ಮಾಡಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಲಕ್ಷಾಂತರ ರೋಗಿಗಳಿಗೆ ೫೦ ಲಕ್ಷ ರೂ.ಗಳವರೆಗೆ ಉಚಿತವಾಗಿ ಆರೋಗ್ಯ ಚಿಕಿತ್ಸಾ ವ್ಯವಸ್ಥೆ ಮಾಡಿದ್ದಾರೆ. ದೇಶದ ಪ್ರಧಾನಿ ಸುಳ್ಳು ಸುಳ್ಳು ಆರೋಪ ಮಾಡುವ ಮೂಲಕ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಸರಿಯಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಯುಷ್ಮಾನ್ ಫ್ಲಾಪ್ ಸ್ಕೀಮ್ಆಯುಷ್ಮಾನ್ ಯೋಜನೆ ಸಂಪೂರ್ಣ ಫ್ಲಾಪ್ ಸ್ಕೀಮ್ ಆಗಿದೆ. ಇದರಲ್ಲಿ, ೫ ಲಕ್ಷ ಮಿತಿಯವರೆಗೆ ಮಾತ್ರ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯನ್ನು ದಾಖಲಿಸಿದರೆ ಮಾತ್ರ ಔಷಧಿಯು ಉಚಿತವಾಗಿರುತ್ತದೆ. ಒಪಿಡಿ ಸೌಲಭ್ಯವಿಲ್ಲ. ಇದು ಎಷ್ಟು ಕೆಟ್ಟ ಯೋಜನೆಯೆಂದರೆ, ಇಂದು ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಜನರು ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಜನತೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಏಕೆಂದರೆ ದೆಹಲಿ ಸರ್ಕಾರವು ಎಲ್ಲ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ ಎಂದಿದ್ದಾರೆ. ಯೋಜನೆ ಆನ್ವಯ ವಾರ್ಷಿಕ ಆದಾಯ ೧.೮ ಲಕ್ಷಕ್ಕಿಂತ ಕಡಿಮೆ ಇರುವವರು ಮಾತ್ರ ೫ ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ದೆಹಲಿ ಸರ್ಕಾರದ ಯೋಜನೆಯಲ್ಲಿ ಅಂತಹ ಯಾವುದೇ ನಿರ್ಬಂಧಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಇಂತಹ ಯೋಜನೆ ನಮಗೆ ಬೇಕೆ?ಆಯುಷ್ಮಾನ್ ಯೋಜನೆ ಅಥವಾ ದೆಹಲಿ ಸರ್ಕಾರದ ಆರೋಗ್ಯ ಯೋಜನೆ ಇದರಲ್ಲಿ ಯಾವುದಾದರೂ ಕೇವಲ ಒಂದು ಯೋಜನೆಯನ್ನು ಮಾತ್ರ ನಡೆಸಬಹುದು ಎಂದು ಕೇಂದ್ರ ಸರ್ಕಾರವು ದೆಹಲಿ ಸರ್ಕಾರಕ್ಕೆ ಷರತ್ತು ವಿಧಿಸಿದೆ. ಇದರಿಂದಾಗಿ ದೆಹಲಿಯ ಶೇ.೯೯ರಷ್ಟು ಜನರು ಚಿಕಿತ್ಸೆಯಿಂದ ವಂಚಿತರಾಗುವಂತಹ ಪರಿಸ್ಥಿತಿ ಉಂಟಾಗಿದೆ. ಇಂತಹ ಯೋಜನೆ ನಮಗೆ ಏಕೆ ಬೇಕು ಎಂದು ಅವರು ಪ್ರಶ್ನಿಸಿದ್ದಾರೆ.