ಸಾರಾಂಶ
ಬಂಗಾರಪೇಟೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಬದಲಿಗೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಗೆ ಶಿಕ್ಷಕರು ಮತ ಹಾಕಬೇಕೆಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ ೩ರಂದು ಚುನಾವಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪಟ್ಟಣದ ನವಚೇತನ, ಎಸ್‌ಡಿಸಿ, ಜೋತಿ ಪಬ್ಲಿಕ್ ಶಾಲೆ ಬಾಲಕಿಯರ ಕಾಲೇಜು ಮತ್ತಿತರ ಶಾಲಾ ಕಾಲೇಜುಗಳಿಗೆ ತೆರಳಿ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದರು.
ಖಾಸಗಿ ಶಾಲೆಗಳಿಗೆ ಬ್ಲಾಕ್ ಮೇಲ್
ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಖಾಸಗಿ ಶಾಲೆಗಳು ಡೊನೇಷನ್ ಪಡೆದರೆ ಅವುಗಳ ಮಾನ್ಯತೆ ರದ್ದು ಮಾಡುವುದಾಗಿ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಬ್ಲಾಕ್ ಮೇಲ್ ತಂತ್ರ ಅನುಸರಿಸಿ ಖಾಸಗಿ ಶಾಲೆಗಳ ಶಿಕ್ಷಕರ ಮತಗಳನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಖಂಡಿಸಿದರು. ಚುನಾವಣೆ ಬಂದಾಗ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರ ಪಡೆಯಲು ಇಂತಹ ಬೆದರಿಕೆ ಹಾಕುತ್ತದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೌರ್ಜನ್ಯ ಹೆಚ್ಚಾಗುತ್ತಿದೆ. ಸರ್ಕಾರದ ನಡೆಯನ್ನು ಗಮನಿಸಿದರೆ ಈ ಸರ್ಕಾರಕ್ಕೆ ಆಯಸ್ಸು ಭವಿಷ್ಯ ಇಲ್ಲ. ವಾಲ್ಮೀಕಿ ನಿಗಮದಲ್ಲಿ ೧೮೭ಕೋಟಿ ಹಗರಣ ಮಾಡಿ ತೆಲಂಗಾಣ ಮತ್ತು ಇತರೇ ರಾಜ್ಯಗಳಲ್ಲಿ ನಡೆದ ಚುನಾವಣೆಗೆ ವರ್ಗಾಯಿಸಿ ಭ್ರಷ್ಟಾಚಾರ ನಡೆಸಿದೆ.
ತನಿಖೆ ಸಿಬಿಐಗೆ ವಹಿಸಲಿ
ನಿಗಮದ ಅಧಿಕಾರಿ ಚಂದ್ರಶೇಖರ್ ಸಚಿವರ ಹೆಸರು ಭ್ರಷ್ಟಾಚಾರದಲ್ಲಿ ಭಾಗಿಯಾರುವುದನ್ನು ಉಲ್ಲೇಖಿಸಿ ಆಹ್ಮತಹ್ಯ ಮಾಡಿಕೊಂಡಿದ್ದರೂ ಸರ್ಕಾರ ಸಚಿವ ನಾಗೇಂದ್ರರನ್ನು ವಜಾ ಮಾಡದೆ ಬೆಂಬಲ ನೀಡುತ್ತಿರುವುದು ಸರ್ಕಾರಕ್ಕೆ ಮಾನಮರ್ಯಾದೆ ಇಲ್ಲದಂತಾಗಿದೆ.ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಬೆಳಕಿಗೆ ಬರಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಉತ್ತಮ ವ್ಯಕ್ತಿ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿರುವ ವ್ಯಕ್ತಿ. ಈಗಾಗಲೇ ಅವರು ಮೂರುಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ನಾಲ್ಕನೇ ಬಾರಿಯೂ ಅವರನ್ನು ಪರಿಷತ್‌ಗೆ ಕಳುಹಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಕೆ.ಚಂದ್ರಾರೆಡ್ಡಿ, ಮಾರ್ಕಂಡೇಗೌಡ, ಡಾ. ಪಲ್ಲವಿಮಣಿ, ತಿಮ್ಮಾಪುರ ಕೃಷ್ಣಮೂರ್ತಿ, ಪುರಸಭೆ ಸದಸ್ಯ ಕಪಾಲಿಶಂಕರ್, ಹೊಸರಾಯಪ್ಪ, ಶ್ರೀನಿವಾಸಗೌಡ, ವೆಂಕಟಸುಬ್ಬಯ್ಯ, ನಾಗೇಂದ್ರ ಇದ್ದರು.