ಸಾರಾಂಶ
ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಯಲ್ಲಿ ಜನಾಭಿಪ್ರಾಯ ಡಾ.ಕೆ.ಸುಧಾಕರ್ ಅವರ ಪರವಾಗಿ ಬಂದಿದ್ದು ನಾನು ಅದನ್ನು ಗೌರವಿಸುವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಶುಕ್ರವಾರ ನಗರದ ಮಿನಿ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಜನತಾ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ. ಆದರೆ ನನ್ನ ಸವಾಲು ಅವರು ಸ್ವೀಕಾರ ಮಾಡಿಲ್ಲ. ಹಾಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿದ್ದರೆ ಗೇಮ್ ಪ್ಲಾನ್ ಬೇರೆ ರೀತಿ ಇರುತ್ತಿತ್ತು ಎಂದರು.ನೆಮ್ಮದಿಯಾಗಿರಲು ಬಿಡೋಲ್ಲ
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸಿದೆ. ಬಿಜೆಪಿಯವರು ನಾನು ರಾಜೀನಾಮೆ ಕೊಡಬಹುದು ಅಂತ ಕಾಯುತ್ತಿದ್ದಾರೆ. ನಾನು ರಾಜೀನಾಮೆ ಕೊಟ್ಟರೆ ನೆಮ್ಮದಿಯಾಗಿ ಇರಬಹುದು ಅಂದುಕೊಂಡಿದ್ದಾರೆ. ಆದರೆ, ನಾನು ಅವರಿಗೆ ನೆಮ್ಮದಿ ಕೊಡಲ್ಲ ಎಂದರು.ನಮ್ಮ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂದ ಈಗಾಗಲೇ ನಾಲ್ವರನ್ನು ಯುವಕರನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರಿದ್ದು ಅವರ ಮೇಲೆ ಕೇಸಾದರೆ ಮುಂದೆ ತೊಂದರೆಯಾಗುತ್ತದೆ ಎಂದು ಯುವಕರಿಗೆ ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದ್ದೇವೆ. ಅದೇ ರೀತಿ ನನ್ನ ಸುಳ್ಳು ರಾಜಿನಾಮೆ ಪತ್ರ ಪೋಸ್ಟ್ ಮಾಡಿದ್ದ ಮೈಸೂರು ಮೂಲದ ಯುವಕನ್ನು ಪೋಲಿಸರು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆಂದರು.