ಸಾರಾಂಶ
ದೇಶದಲ್ಲಿ ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದೆ, ದೇಶದಲ್ಲಿ ನಿರ್ಮಿಸಲಾಗಿರುವ ಸೇತುವೆಗಳು, ಕಾರ್ಖಾನೆಗಳು, ಎಲ್ಲವು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ರಾಜ್ಯ ಸರ್ಕಾರ 5 ಗ್ಯಾರೆಂಟಿಗಳನ್ನು ಈಡೇರಿಸಿದೆ
ಕೆಜಿಎಫ್: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷ ಕಳೆದಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಾದ ಹೊರ ದೇಶದಲ್ಲಿರುವ ಕಪ್ಪು ಹಣವನ್ನು ಇಂದಿಗೂ ವಾಪಸು ತಂದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಹೇಳಿದರು. ನಗರದ ಕಿಂಗ್ ಜಾರ್ಜಹಾಲ್‌ನಲ್ಲಿ ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ಮತ್ತೆ ವಾಪಸ್ ತರುವುದರ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ ನ್ಯಾಯಾಲಯದಲ್ಲಿ ಹೊರ ದೇಶದಲ್ಲಿ ಯಾವುದೇ ಕಪ್ಪು ಹಣವಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟರು. ಇದರಿಂದ ತಿಳಿಯುತ್ತದೆ ಬಿಜೆಪಿ ಮುಖಂಡರು ಹೇಗೆ ದೇಶದ ಜನರನ್ನು ಏಮಾರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಲ್ಲ ವಸ್ತುಗಳ ಬೆಲೆ ಗಗನಕ್ಕೆ
ದೇಶದಲ್ಲಿ ಜಿಎಸ್‌ಟಿ ಜಾರಿಗೆ ತಂದ ನಂತರ ೬೦ ರು. ಇದ್ದ ಪೆಟ್ರೋಲ್ ಬೆಲೆ ಇದೀಗ ೧೦೦ಕ್ಕೆ ಬಂದಿದ್ದರೆ ೫೦ ರು. ಇದ್ದ ಡಿಸೇಲ್ ೮೮ ರು. ಆಗಿದೆ. ಇನ್ನು ೪೦೦ ರು. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ೯೫೦ ರು. ಆಗಿದೆ. ಈ ಹಿನ್ನೆಯಲ್ಲಿ ಸಾಮಾನ್ಯ ಕುಟುಂಬದವರು ಬದುಕು ನಡೆಸಲು ಕಷ್ಟಸಾಧ್ಯವಾಗುತ್ತಿರುವುದನ್ನು ಗಮನಿಸಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿ ಕುಟುಂಬದ ಮಹಿಳೆಯರಿಗೆ 2000 ರು. ಹಾಗೂ ಉಚಿತ ಬಸ್ ಸೇವೆ, ಉಚಿತ ವಿದ್ಯುತ್, ವಿದ್ಯಾವಂತ ಯುವಕ ಯುವತಿಯರಿಗೆ ಪ್ರತಿ ತಿಂಗಳು 3000 ದಿಂದ 5000 ರು.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡುವ ಮೂಲಕ ಸಮಾಜದಲ್ಲಿನ ಬಡವರ ಕೈ ಹಿಡಿದಿದೆ ಎಂದರು.
ಕಾಂಗ್ರೆಸ್ ಕೊಡುಗೆ ಮರೆಯಲಾಗದು
ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದೆ, ದೇಶದಲ್ಲಿ ನಿರ್ಮಿಸಲಾಗಿರುವ ಸೇತುವೆಗಳು, ಕಾರ್ಖಾನೆಗಳು, ಎಲ್ಲವು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ರಾಜ್ಯ ಸರ್ಕಾರ ೫ ಗ್ಯಾರೆಂಟಿಗಳನ್ನು ಈಡೇರಿಸಿದೆ. ಹಾಗೆಯೇ ಕೆಜಿಎಫ್ ನಗರದಲ್ಲಿ ಶೀಘ್ರದಲ್ಲೇ ಕಾರ್ಖಾನೆಗಳು ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಸರ್ಕಾರ ಕೆಐಎಡಿಬಿಗೆ ಜಮೀನು ಹಸ್ತಾಂತರ ಮಾಡಿದೆ. ಮುಂದಿನ ೨ ವರ್ಷಗಳಲ್ಲಿ 10 ರಿಂದ 15 ಸಾವಿರ ಮಂದಿ ಯುವಕ ಯುವತಿಯಿರಿಗೆ ಉದ್ಯೋಗ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.ಕೆಜಿಎಫ್ ವಿಧಾನಸಭೆ ಕ್ಷೇತ್ರವು ಹಿಂದೆ ಹೇಗೆ ಇತ್ತು, ಈಗ ಹೇಗೆ ಬದಲಾವಣೆ ಕಂಡಿದೆ ಎಂಬುದು ನಿಮ್ಮ ಕಣ್ಣ ಮುಂದೆ ಇದೆ. ನಾನು ಮತ್ತಷ್ಟು ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಬೇಕಾದರೆ ನನಗೆ ನೀಡಿದ ಲೀಡ್‌ಗಿಂತ ಹೆಚ್ಚು ಲೀಡ್ ನನ್ನ ಕ್ಷೇತ್ರದಲ್ಲಿ ನೀಡಬೇಕು ಎಂದು ಹೇಳಿದರು.ಯಾರಿಗೂ ಹಣ ನೀಡಿಲ್ಲ
ಸಭೆಗೆ ಆಗಮಿಸಲು ಕಾರ್ಯಕರ್ತರಿಗೆ ಒಂದು ರು. ಸಹ ನೀಡಿಲ್ಲ. ಇದನ್ನು ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನನ್ನ ಮೇಲೆ ಪಕ್ಷದ ಮೇಲೆ ಇಟ್ಟಿರುವ ಅಭಿಮಾನದಿಂದ ಸಾವಿರಾರು ಕಾರ್ಯಕರ್ತರು ಸಭೆಗೆ ಆಗಮಿಸಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಕೋಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ಮುಖಂಡರಾದ ವೆಂಕಟಕೃಷ್ಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣರೆಡ್ಡಿ, ಮುದುಲೈ ಮುತ್ತು, ಕೆಪಿಸಿಸಿ ಕಾರ್ಯದರ್ಶಿ ಕಾರ್ತಿಕ್, ಕೆಡಿಎ ಮಾಜಿ ಅಧ್ಯಕ್ಷ ಜಯಪಾಲ್, ನಗರಸಭೆ ಮಾಜಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ರಮೇಶ್ ಜೈನ್ ಕೆಪಿಸಿಸಿ ಸದಸ್ಯರಾದ ದುರ್ಗಾ ಪ್ರಸಾದ್, ಶ್ರೀನಿವಾಸ್, ಜಿಪಂ ಮಾಜಿ ಸದಸ್ಯರಾದ ಅ.ಮು. ಲಕ್ಷ್ಮಿನಾರಾಯಣ, ಶಾಹಿದ್ ಇದ್ದರು.