ಸಾರಾಂಶ
ಟಿಕೆಟ್ ಘೋಷಣೆ ಇನ್ನೂ 15 ದಿನಗಳ ಮುಂಚಿತವಾಗಿ ಮಾಡಿದ್ದರೆ ಇನ್ನೂ ಚೆನ್ನಾಗಿ ಪ್ರಚಾರ ನಡೆಸಬಹುದಾಗಿತ್ತು, ಚುನಾವಣೆಯ ಅರಿವು ಈಗ ಗೊತ್ತಾಗಿದೆ. ಮುಂದೆ ಕೋಲಾರದಲ್ಲಿಯೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ.
ಕೋಲಾರ : ಸಮಯದ ಅಭಾವ ಕಾರಣ ಗ್ರಾಮೀಣ ಭಾಗಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದರೂ ಕೋಲಾರ ಲೋಕಸಭಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಮುಖಂಡರು ಬಿರುಸಿನ ಪ್ರಚಾರ ನಡೆಸಿದ ಪರಿಣಾಮ ಮೈತ್ರಿ ಅಭ್ಯರ್ಥಿ ಅಲ್ಪ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ತಿಳಿಸಿದರು.ಮತ ಎಣಿಕೆ ಕೇಂದ್ರದಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನನಗೆ ಟಿಕೆಟ್ ಘೋಷಣೆ ಆಗಿದ್ದು ತಡವಾಯಿತು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಪ್ರಾಯವಿಲ್ಲ. ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಮತದಾರರು ಸ್ಪಂದನೆ ಮಾಡಿದ್ದಾರೆ ಎಂದರು.
ಟಿಕೆಟ್ ಘೋಷಣೆ ವಿಳಂಬ
ಟಿಕೆಟ್ ಘೋಷಣೆ ಇನ್ನೂ 15 ದಿನಗಳ ಮುಂಚಿತವಾಗಿ ಮಾಡಿದ್ದರೆ ಇನ್ನೂ ಚೆನ್ನಾಗಿ ಪ್ರಚಾರ ನಡೆಸಬಹುದಾಗಿತ್ತು, ಚುನಾವಣೆಯ ಅರಿವು ಈಗ ಗೊತ್ತಾಗಿದೆ. ಮುಂದೆ ಕೋಲಾರದಲ್ಲಿಯೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ. ಮತದಾರರ ಮನಸ್ಸಿನಲ್ಲಿರುವುದು ಈಗ ನನಗೆ ಅರಿವಾಗಿದೆ, ಟಿಕೆಟ್ ಘೋಷಣೆಯಾಗದಿಂದಲೂ ಎಲ್ಲ ಮುಖಂಡರು ಒಟ್ಟಾಗಿ ಭಿನ್ನಮತವಿಲ್ಲದೆ ಕೆಲಸ ಮಾಡಿದ್ದಾರೆ ಎಂದರು.
ಕೆಎಚ್‌ಎಂ ನನ್ನ ಪರ ಕೆಲಸ ಮಾಡಿದ್ದಾರೆ
ಮೈತ್ರಿ ಕೆಲಸ ಮಾಡಿದ ಕಾರಣ ನಮ್ಮ ಪ್ರತಿಸ್ಪರ್ಧಿ ಗೆಲುವು ಸಾಧಿಸಲು ಅನುಕೂಲವಾಗಿದೆ, ಭಾರೀ ಅಂತರದ ಗೆಲುವು ಏನಲ್ಲ, ಸಚಿವ ಕೆ.ಹೆಚ್.ಮುನಿಯಪ್ಪನವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ, ಅವರು ರಾಷ್ಟ್ರ ನಾಯಕರಾದ ಕಾರಣ ಚುನಾವಣಾ ಪ್ರಚಾರಕ್ಕೆ ಹೆಚ್ಚಾಗಿ ಬರಲು ಸಾಧ್ಯವಾಗಲಿಲ್ಲ, ಅದಕ್ಕೆ ಬೇರೆ ರೀತಿಯ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ, ತಮಗಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ತಿಳಿಸಿದರು.