ಸಾರಾಂಶ
ಕೋಲಾರ : ನಗರದ ಮೂರು ಕಾಲೇಜುಗಳ ಅಭಿವೃದ್ಧಿಗೆ ೩೦ ಕೋಟಿ ರೂ.ಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಬಿಡುಗಡೆ ಮಾಡಿದ್ದಾರೆ. ಹಂತ ಹಂತವಾಗಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ನಗರದ ಸರ್ಕಾರಿ ಮಹಿಳಾ ಕಾಲೇಜಿನ ಅಭಿವೃದ್ಧಿಗಾಗಿ ಮಂಜೂರಾಗಿದ್ದ ೬.೮೫ ಕೋಟಿ ರು.ಗಳ ವೆಚ್ಚದಲ್ಲಿ 15 ನೂತನ ಕೊಠಡಿಗಳಿಗೆ ಹಾಗೂ ಒಂದು ಗ್ರಂಥಾಲಯ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ೩೫೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು
ಗ್ರಾಮೀಣ ಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಇದು ೨ನೇ ಕಾಲೇಜು ಇದಾಗಿದೆ. ಇನ್ನು ೧೦ ಕೋಟಿ ರೂ.ಗಳನ್ನು ಕಾಲೇಜಿಗೆ ಬಿಡುಗಡೆ ಮಾಡಲಾಗುವುದು. ಸರ್ಕಾರಿ ಜೂನಿಯರ್ ಕಾಲೇಜಿಗೆ 5 ಕೋಟಿ, ಬಾಲಕರ ಕಾಲೇಜಿಗೆ ೫ ಕೋಟಿ, ಸೇರಿ ಕಾಲೇಜುಗಳ ಅಭಿವೃದ್ದಿಗೆ ೩೦ ಕೋಟಿ ರೂ.ಗಳನ್ನು ಉನ್ನತ ಶಿಕ್ಷಣ ಸಚಿವರು ಬಿಡುಗಡೆ ಮಾಡಿದ್ದಾರೆ ಎಂದರು. ಇಂದಿರಾ ಕ್ಯಾಂಟೀನ್‌ಗೆ ₹20 ಲಕ್ಷ
ಕೋಲಾರಕ್ಕೆ ಹೆಚ್ಚುವರಿಯಾಗಿ3 ಇಂದಿರಾ ಕ್ಯಾಂಟೀನನ್ನು ಪಡೆಯಲಾಗಿದೆ. ಈಗಾಗಲೇ ಹಳೆಯ ಬಸ್ ನಿಲ್ದಾಣ ಬಳಿ1 ಕಾರ್ಯನಿರ್ವಹಿಸುತ್ತದೆ. ವೇಮಗಲ್ ಬಳಿ ಒಂದು, ಎಪಿಎಂಸಿ. ಬಳಿ ಒಂದು ಹೊಸದಾಗಿ ನಿರ್ಮಿಸಲಾಗುತ್ತಿದೆ. ಮತ್ತೊಂದನ್ನು ಮಹಿಳಾ ಕಾಲೇಜಿನ ಬಳಿ ನಿರ್ಮಿಸಲಾಗುವುದು. ಮಾಜಿ ಸಚಿವ ಶ್ರೀನಿವಾಸಗೌಡರು ಈಗಾಗಲೇ5 ಲಕ್ಷ ರೂ.ಗಳನ್ನು ನೀಡಿದ್ದಾರೆ. ನನ್ನ ಅನುದಾನದಲ್ಲಿ ೫ ಲಕ್ಷ, ಎಂ.ಎಲ್.ಸಿ.ಗಳಾದ ನಸೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ರವರ ಅನುದಾನ ಸೇರಿ 20 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಇಂದಿರಾ ಕ್ಯಾಂಟೀನನ್ನು ಈ ಭಾಗದಲ್ಲಿ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಮುಡಾ ಹಗರಣ ಆಗಿಲ್ಲ ಎಂದು ಹೇಳಲು ಬರುವುದಿಲ್ಲ. ಅದು ತನಿಖಾ ಹಂತದಲ್ಲಿದೆ. ಯಾರೇ ಮಾಡಿದ್ದರೂ ಅದು ತಪ್ಪೇ ಆಗಿರುತ್ತದೆ. ವಿಧಾನಸಭೆಯಲ್ಲಿ ಈ ಬಗ್ಗೆ ಬಿಜೆಪಿಯವರು ಗಲಾಟೆ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಲು ಸಿದ್ಧರಿದ್ದರು. ಅವರು ಕೇಳಲು ಸಿದ್ಧರಿರಲಿಲ್ಲ. ಅವರು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಅಭಿವೃದ್ದಿ ಕುಂಟಿತಗೊಳಿಸುವ ಉದ್ದೇಶ ಅವರದ್ದಾಗಿದೆ ಎಂದರು. ಮೈಸೂರು ಮುಡಾದಲ್ಲಿ ಎಲ್ಲರೂ ಸಾಚಾಗಳೇನೂ ಅಲ್ಲ. ಮೊದಲಿನಿಂದಲೂ ಎಲ್ಲಾ ರೀತಿಯ ಹಗರಣಗಳು ನಡೆದುಹೋಗಿವೆ. ಹಾಗಂತ ಯಾರೂ ಹಗರಣ ಮಾಡಲು ಹೋಗಬಾರದು. ತನಿಖೆ ನಡೆಯುತ್ತಿದೆ. ಸದ್ಯದಲ್ಲಿಯೇ ವಾಸ್ತವಾಂಶ ಹೊರಬೀಳಲಿದೆ ಎಂದರು. ಡಿಸಿಸಿ ಬ್ಯಾಂಕ್ ಚುನಾವಣೆ
ಡಿ.ಸಿ.ಸಿ.ಬ್ಯಾಂಕಿಗೆ ಚುನಾವಣೆ ಆಗಬೇಕು. ಆಗಬಾರದೆಂದು ಯಾರೂ ಒತ್ತಡ ಹಾಕುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಯುತ್ತದೆ. ಕೆಲವು ಅಡೆತಡೆಗಳು ಇರಬಹುದು. ಎಲ್ಲವೂ ಸರಿಹೋಗುತ್ತದೆ. ಅದರ ಹೆಚ್ಚಿನ ಮಾಹಿತಿ ನನ್ನಲಿಲ್ಲ ಕೋಚಿಮುಲ್‌ನ್ನು ವಿಭಜಿಸುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದರು.
ನಗರದ ವರ್ತುಲ ರಸ್ತೆಗೆ 100 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಇನ್ನು ೧೭೦ ಕೋಟಿ ರೂ.ಗಳು ಬಿಡುಗಡೆಯಾಗಬೇಕಾಗಿದೆ. ಮಂತ್ರಿ ಮಂಡಲದಲ್ಲಿ ಅನುಮೋದನೆ ಪಡೆಯಬೇಕಾಗಿದೆ. ಒಂದು ವಾರದಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. 100 ರೂ.ಗಳಿಗೆ ಡಿ.ಪಿ.ಆರ್. ಆಗಿದೆ. ಅದು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು. ಪ್ರಾಂಶುಪಾಲ ಗಂಗಾಧರ್ ರಾವ್, ಕೂಡಾ ಅಧ್ಯಕ್ಷ ಮೊಹಮ್ಮದ್ ಅನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಕೆ.ಪಿ.ಸಿ.ಸಿ. ವಕ್ತಾರ ದಯಾನಂದ, ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್ ಇದ್ದರು.