ರಾಜ್ಯದ ಅಭಿವೃದ್ಧಿಗೆ ಮಾರಕವಾದ ‘ಗ್ಯಾರಂಟಿ’

| Published : Jan 28 2024, 01:19 AM IST

ಸಾರಾಂಶ

ಜನತೆ ನಿರೀಕ್ಷೆಗೆ ತಕ್ಕಂತೆ ಸರ್ಕಾರವು ಕೆಲಸಗಳನ್ನು ಮಾಡುತ್ತಿಲ್ಲ. ಬರುವ ಆದಾಯವನ್ನೆಲ್ಲ ಗ್ಯಾರಂಟಿ ಯೋಜನೆಗಳ ಮೇಲೆ ಹಾಕುತ್ತಿದ್ದು, ಮುಂದಿನ ಬಜೆಟ್‌ನಿಂದ ಜಿಲ್ಲೆಗಾಗಿ ಏನು ನಿರೀಕ್ಷಿಸಲು ಆಗುವುದಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯ ಸರ್ಕಾರವು ಬರುವ ಆದಾಯವನ್ನೆಲ್ಲ ಗ್ಯಾರಂಟಿ ಯೋಜನೆಗಳ ಮೇಲೆ ಹಾಕುತ್ತಿದ್ದು, ಮುಂದಿನ ಬಜೆಟ್‌ನಿಂದ ಜಿಲ್ಲೆಗಾಗಿ ಏನು ನಿರೀಕ್ಷಿಸಲು ಆಗುವುದಿಲ್ಲ, ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನತೆ ನಿರೀಕ್ಷೆಗೆ ತಕ್ಕಂತೆ ಸರ್ಕಾರವು ಕೆಲಸಗಳನ್ನು ಮಾಡುತ್ತಿಲ್ಲ, ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೇಳಿದರೆ ಕಾಯಬೇಕು ಎಂದು ಹೇಳುತ್ತಾರೆ ಎಂದರು.

ಕೋಲಾರದಲ್ಲಿ ಜೆಡಿಎಸ್‌ ಬಲಿಷ್ಠ

ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲುವುದು ಖಚಿತ. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ೮ ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿದ್ದು ಆ ಪೈಕಿ ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಶಿಡ್ಲಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಶೇ.೫೦ಕ್ಕೂ ಹೆಚ್ಚು ಶೇಖಡವಾರು ಮತಗಳು ಜೆಡಿಎಸ್ ಅಭ್ಯರ್ಥಿಗಳಿಗೆ ಚಲಾವಣೆಯಾಗಿವೆ. ಇರುವ ಶಾಸಕರ ಜತೆಗೆ ಲೋಕಸಭಾ ಸದಸ್ಯರೊಬ್ಬರು ಆಯ್ಕೆಯಾದರೆ ಸರ್ಕಾರದ ಮೇಲೆ ಒತ್ತಡ ತಂದು ಅಭಿವೃದ್ಧಿಗೆ ಅನುದಾನ ತರಲು ನೆರವಾಗುತ್ತದೆ ಎಂದರು.ರಾಜ್ಯದಲ್ಲಿ ಜೆಡಿಎಸ್/ಬಿಜೆಪಿ ಮೈತ್ರಿಯಾಗಿದ್ದು ಕೋಲಾರದ ಟಿಕೆಟ್ ಜೆಡಿಎಸ್ ಅಭ್ಯರ್ಥಿಗೆ ಸಿಗುವ ವಿಶ್ವಾಸವಿದೆ. ಯಾವುದೇ ಪಕ್ಷದ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದಾಗ ಎರಡೂ ಪಕ್ಷದ ಕಾರ್ಯಕರ್ತರು ಸಹೋದರರಂತೆ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಬೇಕು. ಈ ಬಗ್ಗೆ ಪಕ್ಷದ ಹಿರಿಯರ ಜತೆಗೆ ಈಗಾಗಲೇ ಚರ್ಚೆ ನಡೆಸಿದ್ದು ಸ್ಥಳಿಯರಿಗೆ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದರು.

ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ

ಇದರ ಜತೆಗೆ ಎಲ್ಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ/ಜೆಡಿಎಸ್ ಕಾರ್ಯಕರ್ತರು ಹಳ್ಳಿಗಳ ಮಟ್ಟದಿಂದ ಸಭೆಗಳನ್ನು ನಡೆಸಿ ಪಕ್ಷದ ಸಂಟನೆಯಲ್ಲಿ ತೊಡಗಿಸಿಕೊಳ್ಳಬೇಕು, ಸಮಾವೇಶನಗಳನ್ನು ನಡೆಸಿ ಶಕ್ತಿ ಪ್ರದರ್ಶನ ಮಾಡಬೇಕಿದೆ. ಜಿಲ್ಲಾಡಳಿತ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಆಡಳಿತ ಯಂತ್ರ ಕುಸಿದಿದೆ, ಜಿಲ್ಲಾ ಉಸ್ತುವಾರಿ ಸಚಿವರು ೮ ತಿಂಗಳಿಗೆ ಕೇವಲ ೨ ಸಭೆಗಳನ್ನು ನಡೆಸಿದ್ದಾರೆ. ಐಪೋಡ್ ಕಿವಿಯಲ್ಲಿಟ್ಟುಕೊಂಡು ಸಭೆಗಳನ್ನು ನಡೆಸಿದ ಸಚಿವರನ್ನು ಎಲ್ಲೂ ಕಂಡಿಲ್ಲ, ಈ ರೀತಿ ಮಾಡಿದರೆ ಅಧಿಕಾರಿಗಳು ಹೇಳಿದ್ದು ಏನು ಕೇಳಿಸುತ್ತದೆ. ಅಭಿವೃದ್ಧಿ ವಿಚಾರವಾಗಿ ಸಭೆಗಳನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.ಮುಂದಿನ ತಿಂಗಳು ಬಜೆಟ್ ಅಧಿವೇಶನ ನಡೆಯಲಿದ್ದು ಜಿಲ್ಲೆಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗೆ ಅಗತ್ಯವಾಗಿ ಬೇಕಾಗಿರುವ ಅನುದಾನ ಕ್ರಿಯಾಯೋಜನೆ ತಯಾರಿಸಲು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕಾಗಿತ್ತು. ಏಕಾಏಕಿಯಾಗಿ ಅನುದಾನಕ್ಕೆ ಬೇಡಿಕೆ ಇಟ್ಟರೆ ಮಂಜೂರು ಆಗುವುದಿಲ್ಲ. ರಿಂಗ್‌ರೋಡ್, ಮೆಡಿಕಲ್ ಕಾಲೇಜು, ಮಾವು ಸಂಸ್ಕರಣಾ ಘಟಕ ಇವೆಲ್ಲ ಭರವಸೆಗಳಾಗಿಯೇ ಉಳಿಯುತ್ತವೆ ಎಂದರು.

ಬಿಜೆಪಿ, ಜೆಡಿಎಸ್‌ ಮೈತ್ರಿ

ಕಳೆದ ಬಾರಿ ಕಾಂಗ್ರೆಸ್‌, ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಒಳ ಕುತಂತ್ರಗಳಿಂದ ಕಾಂಗ್ರೆಸ್ ಸೋಲು ಕಂಡಿತೇ ಹೊರತು ಜೆಡಿಎಸ್ ಕಾರಣವಾಗಿಲ್ಲ. ೨೦೦೮ರಲ್ಲಿ ಜೆಡಿಎಸ್/ಬಿಜೆಪಿ ಸಮ್ಮಿಶ್ರ ಸರ್ಕಾರದ ೨೦ ತಿಂಗಳ ಅವಧಿಯು ಐತಿಹಾಸಿಕ ಪುಟಗಳಲ್ಲಿ ಉಳಿದಿದೆ. ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕಾಂಗ್ರೆಸ್ ಸತ್ಯ ಅರಿತು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.