ಜೆಡಿಎಸ್‌, ಬಿಜೆಪಿ ಮೈತ್ರಿ ಒಗ್ಗಟ್ಟು ಪ್ರದರ್ಶಿಸಬೇಕು

| Published : Mar 31 2024, 02:16 AM IST / Updated: Mar 31 2024, 05:03 AM IST

ಸಾರಾಂಶ

ಜೆಡಿಎಸ್‌ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬೇರು ಮಟ್ಟದಿಂದ ಸಮನ್ವಯ ಸಮಿತಿಗಳ ರಚಿಸಿಕೊಂಡು ಪ್ರಚಾರದ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದೆ. ಈ ಚುನಾವಣೆ ಪ್ರತಿಯೊಬ್ಬರು ಪ್ರತಿಷ್ಠೆಯಾಗಿ ಪರಿಗಣಿಸಬೇಕು

  ಕೋಲಾರ: ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಆನೆ ಬಲ ಬಂದಂತಾಗಿದೆ. ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷಗಳು ಸಮನ್ವಯ ಸಮಿತಿಗಳನ್ನು ರಚಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು, ಎರಡು ಪಕ್ಷಗಳ ಆಡಳಿತದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಜನತೆಯ ಮುಂದಿಟ್ಟು ಮತಯಾಚಿಸುವಂತಾಗಬೇಕೆಂದು ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ತಿಳಿಸಿದರು.

ನಗರದ ಪಿ.ಸಿ.ಬಡಾವಣೆಯ ಸಿ.ಎಂ.ಆರ್. ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜೆ.ಡಿ.ಎಸ್. ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನನ್ನ ವಿಶ್ವಾಸವಿಟ್ಟು ಲೋಕಸಭೆಗೆ ಟಿಕೆಟ್ ನೀಡುವ ಮೂಲಕ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. 

ಕಳೆದ30  ವರ್ಷದಿಂದ ಕೋಲಾರದಲ್ಲಿ ನೆಲೆಸಿದ್ದು ಸಮಾಜ ಸೇವೆಯಲ್ಲಿ ಯಾವುದೇ ಪ್ರಚಾರಗಳಿಗೆ ಇಚ್ಚಿಸದೆ ಮುಂದುವರೆಸಿಕೊಂಡು ಬಂದಿದ್ದೇನೆ, ಇದನ್ನು ಜೆ.ಡಿ.ಎಸ್. ಗುರುತಿಸಿ ತಮಗೆ ಟಿಕೆಟ್‌ ನೀಡಿದೆ. ಇದನ್ನು ಸದ್ಬಳಿಸಿಕೊಳ್ಳುವ ದೆಸೆಯಲ್ಲಿ ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರಗಳನ್ನು ಸುತ್ತಾಡಿ ಮತಯಾಚಿಸುತ್ತೇನೆ ಎಂದರು.

ಸಮನ್ವಯ ಸಮಿತಿ ರಚನೆ ಮಾಡಬೇಕು

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಜೆಡಿಎಸ್‌ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬೇರು ಮಟ್ಟದಿಂದ ಸಮನ್ವಯ ಸಮಿತಿಗಳ ರಚಿಸಿಕೊಂಡು ಪ್ರಚಾರದ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದೆ. ಈ ಚುನಾವಣೆ ಪ್ರತಿಯೊಬ್ಬರು ಪ್ರತಿಷ್ಠೆಯಾಗಿ ಪರಿಗಣಿಸುವಂತೆ ಮನವಿ ಮಾಡಿದರು.

ಜನಪರ ಕಾಳಜಿಯ ವ್ಯಕ್ತಿ

ಶ್ರೀನಿವಾಸಪುರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೋಲಾರ ಲೋಕಸಭೆಗೆ ಎನ್.ಡಿ.ಎ. ಅಭ್ಯರ್ಥಿಯಾಗಿ ನೇಮಿಸಿರುವ ಮಲ್ಲೇಶ್ ಬಾಬು ಎಲ್ಲರಿಗೂ ಚಿರಪರಿಚಿತ ವ್ಯಕ್ತಿ, ಈ ಚುನಾವಣೆಯಲ್ಲಿ ದೇವರ ಆಶೀರ್ವಾದ ದಿಂದ ಬಹುಮತಗಳಿಂದ ಆಯ್ಕೆಯಾಗುವುದು ಖಚಿತ, ಜನರ ಸೇವೆಯ ಬಗ್ಗೆ ಕಾಳಜಿ ಇರುವಂತವರು, ಇಂತಹ ಯುವಕರಿಗೆ ಅಧಿಕಾರ ನೀಡಲು ಎಲ್ಲರೂ ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಜೆಡಿಎಸ್‌ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಕ್ಷೇತ್ರಗಳ ಪೈಕಿ ಮಂಡ್ಯ ಮತ್ತು ಹಾಸನಕ್ಕಿಂತ ಕೋಲಾರ ಲೋಕಸಭಾ ಮೀಸಲು ಕ್ಷೇತ್ರವು ಪ್ರತಿಷ್ಠಿತ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮಲ್ಲೇಶ್‌ಬಾಬುರನ್ನು ಗೆಲ್ಲಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಮುಖಂಡರಿಗೂ ಸವಾಲಿನ ಪ್ರಶ್ನೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಕೃಷ್ಟಾರೆಡ್ಡಿ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ವಡಗೂರು ರಾಮು, ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ನಗರಸಭೆ ಸದಸ್ಯ ರಾಕೇಶ್‌ಗೌಡ, ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್. ಒಕ್ಕಲಿಗ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಇದ್ದರು.