‘ಕರ್ನಾಟಕಕ್ಕಾಗಿ ನಾವು’ ಕೆಆರ್‌ಎಸ್‌ ಬೈಕ್‌ ಜಾಥಾ

| Published : Feb 20 2024, 01:46 AM IST / Updated: Feb 20 2024, 11:31 AM IST

Bike Jatha

ಸಾರಾಂಶ

ಪ್ರಾದೇಶಿಕ ರಾಜಕಾರಣ ಕುರಿತು ಜನಜಾಗೃತಿ ಮೂಡಿಸಲು ಕೆಆರ್ ಎಸ್ ಪಕ್ಷವು ಕರ್ನಾಟಕಕ್ಕಾಗಿ ನಾವು ಘೋಷಣೆಯಡಿ ಬೈಕ್ ಜಾಥಾ ಹಮ್ಮಿಕೊಂಡಿದ್ದು, ರಾಜ್ಯದಾದ್ಯಂತ 3000 ಕಿ.ಮೀ ಬೈಕ್ ಜಾಥಾ ಮೂಲಕ ಸಂಚರಿಸಿ ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳನ್ನು ತಿರಸ್ಕರಿಸಿ, ರಾಜ್ಯದ ಏಕೈಕ ಪ್ರಾಮಾಣಿಕ ಪ್ರಾದೇಶಿಕ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿಯನ್ನು ಬೆಂಬಲಿಸಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕೋರಿದರು.

ಕರ್ನಾಟಕ ರಾಷ್ಟ್ರ ಸಮಿತಿ ಕೆಆರ್‌ಎಸ್ ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಪ್ರಾರಂಭವಾದ ಬೈಕ್ ಜಾಥಾವನ್ನು ಉದ್ಘಾಟಿಸಿ, ಚಿಕ್ಕಬಳ್ಳಾಪುರ ತಲುಪಿದಾಗ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಪ್ರಾದೇಶಿಕ ರಾಜಕಾರಣ ಕುರಿತು ಜನಜಾಗೃತಿ ಮೂಡಿಸಲು ಕೆಆರ್ ಎಸ್ ಪಕ್ಷವು ಕರ್ನಾಟಕಕ್ಕಾಗಿ ನಾವು ಘೋಷಣೆಯಡಿ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದರು.

ಕೆಆರ್‌ಎಸ್‌ ಪಕ್ಷ ಬೆಂಬಲಿಸಿ: “ಭ್ರಷ್ಟರನ್ನು, ಅಪ್ರಮಾಣಿಕರನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವವರನ್ನು ಆಯ್ಕೆ ಮಾಡಿದ್ದು ಸಾಕು. 

ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೆಆರ್‌ಎಸ್‌ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕರ್ನಾಟಕಕ್ಕಾಗಿ ನಾವು ರಾಜ್ಯದಾದ್ಯಂತ 3000 ಕಿ.ಮೀ ಬೈಕ್ ಜಾಥಾ ಮೂಲಕ ಸಂಚರಿಸಿ ಜನತೆಯನ್ನು ಜಾಗೃತಗೊಳಿಸಲಿದ್ದೇವೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೆ ಆರ್ ಎಸ್ ಪಕ್ಷ ನೀಲನಕ್ಷೆ ತಯಾರಿಸಿದೆ ಎಂದು ಅ‍ರು ಹೇಳಿದರು.

ಹಲವು ಅಭಿವೃದ್ಧಿ ಯೋಜನೆ: ಅದರಲ್ಲಿ ಖಾಸಗಿ ಶಾಲೆಗಳ ಗುಣ ಮಟ್ಟದಂತೆ ಸರ್ಕಾರಿ ಉಚಿತ ಶಾಲೆಗಳು,3 ಲಕ್ಷಕ್ಕಿಂತ ಹೆಚ್ಚು ಸರ್ಕಾರಿ ಹುದ್ದೆಗಳ ಪಾರದರ್ಶಕ ನೇಮಕಾತಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಆದುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕೆಆರ್ ಎಸ್ ಪಕ್ಷವನ್ನು ಬೆಂಬಲಿಸಿ ಎಂದರು.

ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಯ ಕಾರ್ಯದರ್ಶಿ ಜಾಣಗೆರೆ ರಘು, ಸಿ.ಎನ್. ದೀಪಕ್ , ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ , ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ನರಸಿಂಹಮೂರ್ತಿ, ಮಂಜುನಾಥ್ ಎಸ್,ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್ ನಂದಾರೆಡ್ಡಿ, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.