ಸಾರಾಂಶ
ಮಾಲೂರು : ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ದೊಡ್ಡಶಿವಾರ ನಾಣಿ, ಈಗಾಗಲೇ ದಿನ ನಿತ್ಯ ಬಳಕೆ ಪದಾರ್ಥಗಳ, ತರಕಾರಿಗಳ ಬೆಲೆ ಗಗನಕ್ಕೆ ಮಟ್ಟಿದ್ದು, ಜನಸಾಮಾನ್ಯರ ಜೀವನ ದುಸ್ಥಿರವಾಗಿದೆ. ಇಂತಹ ವೇಳೆ ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಎಲ್ಲ ಪದಾರ್ಥಗಳ ಬೆಲೆ ಎನ್ನಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಕುಸಾಗಣೆ ದರ ಹೆಚ್ಚಳ
ರಾಜ್ಯ ಸರ್ಕಾರವು ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಉಚಿತ ಯೋಜನೆಯನ್ನು ಘೋಷಿಸಿದೆ. ಆದರೆ ಇನ್ನೊಂದಡೆ ಎಲ್ಲದರ ಬೆಲೆಯನ್ನು ಹೆಚ್ಚಿಸಿ ಬಡವರನ್ನು ಶೋಷಣೆಗೆ ಒಳಗಾಗುವಂತೆ ಮಾಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುವುದರಿಂದ ಬಸ್ ಟಿಕೆಟ್ ದರ ಹೆಚ್ಚಾಗುವ ಜತೆಯಲ್ಲಿ ಸರಕು ಸಾಗಣೆ ದರ ಹೆಚ್ಚಾಗಲಿದೆ. ನಿತ್ಯ ಬಳಕೆಗಳ ದರ ಹೆಚ್ಚಾಗಲಿದೆ ಎಂದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತವೆ. ಜನರನ್ನು ಯಮಾರಿಸುವ ಕೆಲಸವಾಗುತ್ತಿದೆ. ಆದರೆ ಜನರಲ್ಲಿ ರಾಜಕೀಯ ಜ್ಞಾನ ಚೆನ್ನಾಗಿದ್ದು, ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇದರ ಪರಿಣಾಮ ಮುಂಬರಲಿರುವ ದಿನಗಳಲ್ಲಿ ಜನರೇ ಪಾಠ ಕಲಿಸಲಿದ್ದಾರೆ. ಜನ ಸಾಮಾನ್ಯರ ಕಷ್ಟ ಆರಿತು ಜನ ವಿರೋಧಿಯಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಾಂತ ಕರವೇ ಹೋರಾಟ ಹಮ್ಮಿಕೊಳ್ಳುತ್ತದೆ ಎಂದರು.ವೇದಿಕೆಯ ದಯಾನಂದ್, ಕೊಪ್ಪಚಂದ್ರು,ಆನೇಪುರ ದೇವರಾಜ್,ಮಣಿಗಂಡನ್,ಕೇಬಲ್ ಕಿರಣ್,ಅಮರ ನಾರಾಯಣ್,ಚಿ.ನಾಗರಾಜ್,ಶಿವಕುಮಾರ್ ಎಸ್.ಕೆ. ಆಟೋ ನಾರಾಯಣಸ್ವಾಮಿ,ಶಿವಾರ ನಾಗರಾಜ್ ಇನ್ನಿತರರು ಇದ್ದರು.