ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯತೀಂದ್ರ ಅವರು ಈ ರಾಜ್ಯದ ಸೂಪರ್ ಸಿಎಂ ಆಗಿದ್ದಾರೆ. ಎಲ್ಲ ವಿಚಾರದಲ್ಲೂ ಯತೀಂದ್ರ ಅವರ ಮಾತೇ ನಡೆಯುತ್ತಿದೆ. ಅದಕ್ಕಾಗಿಯೇ ಯತೀಂದ್ರ ಸೂಪರ್ ಸಿಎಂ ಎನ್ನುತ್ತಿರುವೆ. ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗಳನ್ನೆಲ್ಲ ಯತೀಂದ್ರ ಅವರೇ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಬಿ.ಶ್ರೀರಾಮುಲು ದೂರಿದರು.ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತೀಂದ್ರ ಫೋನ್ ಕರೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಾ? ಅಥವಾ ಅವರ ಮಗ ಯತೀಂದ್ರಾ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವೈಎಸ್‌ಟಿ ಟ್ಯಾಕ್ಸ್ ಎಂದಿದ್ದು ನಿಜಾನಾ? ಎಂಬ ಪ್ರಶ್ನೆಗೆ, ಎಚ್‌ಡಿಕೆ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಅದು ಯತೀಂದ್ರ ಅವರ ವೈಎಸ್‌ಟಿ ಟ್ಯಾಕ್ಸ್, ಯತೀಂದ್ರ ಅವರೇ ಸೂಪರ್ ಸಿಎಂ ಎಂದು ಲೇವಡಿ ಮಾಡಿದರು.ಈ ವಿಚಾರದ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಿದ್ದು, ಅದು ನನಗೆ ಸಮಾಧಾನ ತಂದಿಲ್ಲ. ಕಾಂಗ್ರೆಸ್ ಪಕ್ಷ ಯತೀಂದ್ರ ಅವರ ಕೈಯಲ್ಲಿದೆ ಅನ್ನೋದು ಸ್ಪಷ್ಟವಾಗುತ್ತೆ. ಸಿಎಂ ಅವರ ಮಗಾ ಯತೀಂದ್ರ ಪಾರ್ಟಿ ನಡೆಸುತ್ತಿದ್ದಾನೆ, ಅರ್ಥ ಮಾಡಿಕೊಳ್ಳಿ ಪಕ್ಷದ ಸ್ಥಿತಿ ಏನಾಗಿದೆ ಎಂದರು.ವಿ.ಸೋಮಣ್ಣ, ಯತ್ನಾಳ ಸೇರಿದಂತೆ ಎಲ್ಲರೂ ನಮ್ಮ ಹಿರಿಯ ನಾಯಕರು. ಏನೇ ಅಸಮಾಧಾನ ಇದ್ದರೂ ಪಕ್ಷ ಅವರನ್ನು ಬಿಟ್ಟುಕೊಡಲ್ಲ. ಅವರೂ ಪಕ್ಷವನ್ನು ಬಿಟ್ಟುಕೊಡಲ್ಲ, ಸಣ್ಣಪುಟ್ಟ ಗೊಂದಲ ಇದ್ದರೆ ಸರಿಪಡಿಸಿಕೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸಮರ್ಥಿಸಿಕೊಂಡರು.ಜಮೀರ್ ಅಹ್ಮದ್ ಖಾನ್ ಕ್ಷಮೆ ಕೇಳಲಿ:
ಬಿಜೆಪಿಗರು ಮುಸ್ಲಿಂ ಸ್ಪೀಕರ್‌ಗೆ ನಮಸ್ಕಾರ ಸಾಬ್ ಅಂತ ನಿಂತುಕೊಳ್ಳುವಂತಾಗಿದೆ ಎಂಬ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ಜಮೀರ್ ಮಾಡಿದ್ದಾರೆ. ಸಂವಿಧಾನ ಬರೆಯುವ ವೇಳೆ ಯಾವುದೇ ಜಾತಿ, ಧರ್ಮ ಉಲ್ಲೇಖ ಮಾಡಿಲ್ಲ, ತೆಲಂಗಾಣ ಪ್ರಚಾರಕ್ಕೆ ಹೋಗಿ ಶಹಬ್ಬಾಶ್ ಗಿರಿ ಪಡೆಯಲು ಮೂರ್ಖತನದ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರು ನಾಡಿನ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಅವರು, ಅವರ ಸ್ವಾರ್ಥಕ್ಕೆ, ಪುಕ್ಕಟೆ ಪ್ರಚಾರಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನ ನಿಮಗೆ (ಕಾಂಗ್ರೆಸ್ ಗೆ) ಕಲ್ಲು ಒಗೆಯುತ್ತಾರೆ ಎಂದು ಹೇಳಿದರು.ಸರ್ಕಾರ ದಿವಾಳಿಯಾಗಿದೆ:
ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲರೂ ಆಶಾಢಭೂತಿಗಳೇ ಇದ್ದಾರೆ. ಡೋಂಗಿತನ ಮಾಡಿಕೊಂಡು ಜನತೆಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಯಾವುದೇ ಇಲಾಖೆಯಲ್ಲೂ ಅನುದಾನ ಇಲ್ಲ. ಶಾಸಕರಿಗೆ ಅನುದಾನವನ್ನೇ ಕೊಡುತ್ತಿಲ್ಲ. ಮಾಜಿ ಶಾಸಕರಿಗೆ ಪೆನ್ಶನ್ ಕೊಡಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸಂಬಳ ಕೊಡಲು ಹಣ ಇಲ್ಲ. ಗುತ್ತಿಗೆದಾರರಿಗೆ, ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಹಣ ಇಲ್ಲ, ಇಂತಹ ದುರ್ಬಲ ಸ್ಥಿತಿಗೆ ಸರ್ಕಾರ ಬಂದು ತಲುಪಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾತೇ ಆಡುತ್ತಿಲ್ಲ. ಸಿಎಂ, ಡಿಸಿಎಂ ಡೋಂಗಿ ಪ್ರಚಾರ ಮಾಡುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಹೇಗೆ ಸ್ಪಂದಿಸುವ ಬಗ್ಗೆ ಯೋಚಿಸುತ್ತಿಲ್ಲ. ಸರ್ಕಾರ ನೀಡಿದ ಅನುದಾನ ಯಾವುದಕ್ಕೂ ಪ್ರಯೋಜನ ಇಲ್ಲ. ಹೀಗಾಗಿ ನಾನು ಸರ್ಕಾರವನ್ನು ಆಷಾಢಭೂತಿಗಳೆಂದು ಕರೆಯುತ್ತಿದ್ದೇನೆ. ಪ್ರಚಾರದ ಮಾರ್ಕೆಟಿಂಗ್ ನಲ್ಲಿ ಯಾವುದರಲ್ಲೂ ಕಾಂಗ್ರೆಸ್ ನವರು ಕಡಿಮೆ ಇಲ್ಲ, ಈ ಸರ್ಕಾರಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಯಾರೂ ಕೆಲಸ ಮಾಡದೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಮುಲು ಹೇಳಿದರು.