ಸಿದ್ದು ಸರ್ಕಾರಕ್ಕೆ 2.5 ವರ್ಷ

| Published : Nov 20 2025, 12:00 AM IST

ಸಾರಾಂಶ

ಪಂಚ ಗ್ಯಾರಂಟಿ ಮತ್ತು ಅದರ ಯಶಸ್ವಿ ಜಾರಿ ಮಾಡಿದ ಸಾಧನೆ, ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಗಳ ಕೊಡುಗೆ ಮತ್ತು ರಾಜಕೀಯ ತಲ್ಲಣಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು 2.5 ವರ್ಷದ ಅವಧಿ ಪೂರ್ಣಗೊಳಿಸಿದೆ.

ಪಂಚಗ್ಯಾರಂಟಿ ಜಾರಿ ಸಾಧನೆ, ರಾಜಕೀಯ ತಲ್ಲಣಗಳ ನಡುವೆಯೇ

ಎರಡೂವರೆ ವರ್ಷ ಪೂರೈಸಿದ ಸರ್ಕಾರ

ಇಂದಿನಿಂದ ಸಿದ್ದು ಸರ್ಕಾರದ ಸೆಕೆಂಡ್‌ ಇನ್ನಿಂಗ್ಸ್‌ । ದಿಲ್ಲಿಯಿಂದ ನ್ಯೂಯಾರ್ಕ್‌ವರೆಗೂ ವ್ಯಾಪಿಸಿದ ರಾಜ್ಯದ ಗ್ಯಾರಂಟಿಗ್ಯಾರಂಟಿಯಿಂದ ಬೊಕ್ಕಸ ಬರಿದೆಂಬ ಆತಂಕ ದೂರ ಮಾಡಿ ಇತರರಿಗೆ ಮಾದರಿ । ಅಭಿವೃದ್ಧಿ ಯೋಜನೆಗೂ ಅನುದಾನ

==

ನಡೆದುಬಂದ ಹೆಜ್ಜೆ

2023ರ ಮೇ 20ರಂದು ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ

ಸರ್ಕಾರ ಜಾರಿಗೆ ಬಂದು ನ.19ಕ್ಕೆ ಎರಡೂವರೆ ವರ್ಷ ಪೂರ್ಣ. ಇಂದಿನಿಂದ ಸಿಎಂ ಸಿದ್ದು ಸರ್ಕಾರದ ಎರಡನೇ ಅವಧಿ ಆರಂಭ

ಗ್ಯಾರಂಟಿ ಜಾರಿ, ನಕ್ಸಲ್‌ ಮುಕ್ತ ರಾಜ್ಯ, ಒಳಮೀಸಲು, ರೈತರ ಪರ ನಿರ್ಧಾರ, ಕಂದಾಯ ಇಲಾಖೆ ಸುಧಾರಣೆ ಸರ್ಕಾರದ ಹೆಗ್ಗಳಿಕೆ

ಮುಡಾ, ವಾಲ್ಮೀಕಿ ಹಗರಣದ ಆರೋಪಗಳು ರಾಜಕೀಯ ಪ್ರೇರಿತ ಎಂಬ ಕಾರಣಕ್ಕೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ವಿಫಲ

ಧರ್ಮಸ್ಥಳ ಬುರುಡೆ ಕೇಸ್‌, ಆರ್‌ಎಸ್‌ಎಸ್‌ ವಿವಾದದಂತಹ ಸಣ್ಣ ಪುಟ್ಟ ವಿವಾದಗಳೂ ಸರ್ಕಾರದ ಬಗ್ಗೆ ಚರ್ಚೆ ಹುಟ್ಟು ಹಾಕಿದ ವಿಷಯ

ಅಧಿಕಾರ ಹಂಚಿಕೆ, ಸಂಪುಟ ಪುನಾರನಚೆ, ದಲಿತ ಸಿಎಂ ಹೇಳಿಕೆ ಸರ್ಕಾರದ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವ ಉಂಟು ಮಾಡಿಲ್ಲ

ಪಂಚ ಗ್ಯಾರಂಟಿ ದೇಶ- ವಿದೇಶಕ್ಕೂ ವ್ಯಾಪಿಸಿತು. ಗ್ಯಾರಂಟಿ ಬೊಕ್ಕಸ ಬರಿದು ಮಾಡಲಿದೆ ಎಂಬ ಆರೋಪವನ್ನು ಸರ್ಕಾರ ಸುಳ್ಳು ಮಾಡಿತು

ಗ್ಯಾರಂಟಿ ಜಾರಿಯ ಹೊರತಾಗಿಯೂ ಅಭಿವೃದ್ದಿ ಯೋಜನೆಗೆ ಹಣ ಕೊರತೆ ಆಗದಂತೆ ನಿರ್ವಹಿಸುವ ಮೂಲಕ ಸರ್ಕಾರ ಮಾದರಿ ಆಯ್ತು

==

ಕನ್ನಡಪ್ರಭ ವಾರ್ತೆ ಬೆಂಗಳೂರುಪಂಚ ಗ್ಯಾರಂಟಿ ಮತ್ತು ಅದರ ಯಶಸ್ವಿ ಜಾರಿ ಮಾಡಿದ ಸಾಧನೆ, ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಗಳ ಕೊಡುಗೆ ಮತ್ತು ರಾಜಕೀಯ ತಲ್ಲಣಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು 2.5 ವರ್ಷದ ಅವಧಿ ಪೂರ್ಣಗೊಳಿಸಿದೆ.2023ರ ಮೇ 20 ರಂದು ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇಂದಿಗೆ ( ಮೇ 20) ಸಾಂಗವಾಗಿ ಎರಡೂವರೆ ವರ್ಷದ ಅವಧಿ ಪೂರೈಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ದ್ವಿತೀಯಾರ್ಧದ ಆರಂಭ ಇಂದಿನಿಂದ ಶುರುವಾಗಲಿದೆ.ಮೊದಲಾರ್ಧದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ, ನಕ್ಸಲ್‌ ಮುಕ್ತ ರಾಜ್ಯ ಘೋಷಣೆ, ಒಳಮೀಸಲಾತಿ ಜಾರಿ, ರೈತರ ಪರ ದಿಟ್ಟ ನಿರ್ಧಾರಗಳು, ಕಂದಾಯ ಇಲಾಖೆಯಲ್ಲಿ ಸಾಲು-ಸಾಲು ಸುಧಾರಣೆ, ಹಗರಣ ರಹಿತ ಆಡಳಿತದಿಂದ ಜನ ಮನ್ನಣೆ ಗಳಿಸಿದೆ. ಮುಡಾ, ವಾಲ್ಮೀಕಿ ನಿಗಮ ಹಗರಣದ ಆರೋಪ ಕೇಳಿ ಬಂದರೂ ರಾಜಕೀಯ ಪ್ರೇರಿತ ಎಂಬ ಕಾರಣಕ್ಕೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ವಿಫಲವಾಗಿವೆ. ಗುತ್ತಿಗೆದಾರರ ಸಂಘ ಶೇ.50 ರಷ್ಟು ಕಮಿಷನ್‌ ಆರೋಪ ಮಾಡಿದರೂ ದಾಖಲೆ ಒದಗಿಸಲು ವಿಫಲವಾಯಿತು.ಧರ್ಮಸ್ಥಳ ಬುರುಡೆ ಕೇಸ್‌, ಆರ್‌ಎಸ್‌ಎಸ್‌ ವಿವಾದದಂಥ ಸಣ್ಣ ಪುಟ್ಟ ವಿವಾದಗಳೂ ಚರ್ಚೆ ಹುಟ್ಟು ಹಾಕಿದ್ದವು. ಮತ್ತೊಂದೆಡೆ ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ, ಸಂಪುಟ ಪುನರ್ ರಚನೆ, ದಲಿತ ಮುಖ್ಯಮಂತ್ರಿ ಸೇರಿ ಸಚಿವರ ಇರಿಸು-ಮುರುಸು ಹೇಳಿಕೆಗಳಿಂದ ರಾಜಕೀಯ ತಲ್ಲಣಗಳು ಉಂಟಾದರೂ ಸರ್ಕಾರದ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವ ಉಂಟು ಮಾಡಿಲ್ಲ.ಗ್ಯಾರಂಟಿ ಸಾಧನೆ, 1 ಲಕ್ಷ ಕೋಟಿ ವೆಚ್ಚ:ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿದ ಸರ್ಕಾರವು ಮೊದಲ ಆರು ತಿಂಗಳಲ್ಲೇ ಐದು ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದೆ. ಈವರೆಗೆ 1.05 ಲಕ್ಷ ಕೋಟಿ ರು. ಪ್ರಯೋಜನವನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಈ ಕರ್ನಾಟಕ ಮಾದರಿ ದೇಶ, ವಿದೇಶದಲ್ಲೇ ಮನ್ನಣೆ ಪಡೆದಿದ್ದು, ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸೇರಿ ಎಲ್ಲಾ ಪಕ್ಷಗಳೂ ಅನುಸರಿಸುವಂತಹ ಪ್ರೇರಣೆ ನೀಡಿದೆ.ಪಂಚ ಗ್ಯಾರಂಟಿ ಜಾರಿಯಾದಾಗ ಆರ್ಥಿಕತೆಗೆ ಬೊಕ್ಕಸಕ್ಕೆ ಧಕ್ಕೆ ಆಗಲಿದೆ. ಸರ್ಕಾರ ದಿವಾಳಿಯಾಗಲಿದೆ ಎಂಬೆಲ್ಲಾ ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಸಂವಾದಿಯೆಂಬಂತೆ ರಾಜ್ಯದ ಗ್ಯಾರಂಟಿಯಿಂದ ಪ್ರೇರಣೆ ಪಡೆದು ವಿವಿಧ ಗ್ಯಾರಂಟಿ ಆರಂಭಿಸಿದ್ದ ಹಿಮಾಚಲಪ್ರದೇಶ ಹಾಗೂ ಮಹಾರಾಷ್ಟ್ರದಂತಹ ಕೆಲ ರಾಜ್ಯಗಳು ಆರ್ಥಿಕ ಸಂಕಷ್ಟ ಅನುಭವಿಸಿದವು.ಆದರೆ, ಗ್ಯಾರಂಟಿಗಳನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ಅಭಿವೃದ್ಧಿ ಯೋಜನೆಗಳಿಗೆ ತಡೆಯಾಗದಂತೆ ಸಿದ್ದರಾಮಯ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಗ್ಯಾರಂಟಿ ಅನುಕರಿಸಿದ ಕೆಲ ರಾಜ್ಯಗಳು ದಿವಾಳಿಯತ್ತ ಸಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ದಿನದಿಂದ ದಿನಕ್ಕೆ ಆರ್ಥಿಕವಾಗಿ ಸಬಲವಾಗುತ್ತಿದೆ.ತಲಾದಾಯದಲ್ಲಿ ದೇಶದಲ್ಲೇ ನಂ.1:ಗ್ಯಾರಂಟಿಗಳ ಪರಿಣಾಮವಾಗಿ ರಾಜ್ಯವು ತಲಾದಾಯದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ 500 ಕೋಟಿ ಬಾರಿ ಪ್ರಯಾಣ ಮಾಡಿರುವುದು ಗಿನ್ನೆಸ್‌ ವಿಶ್ವ ದಾಖಲೆಯಾಗಿದೆ.ಇದರ ನಡುವೆಯೇ ಗ್ಯಾರಂಟಿಯಿಂದ ಅನುದಾನ ಕೊರತೆ ಆಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಪ್ರತಿಪಕ್ಷದ ಶಾಸಕರಿಗೂ ಸೇರಿ ಎಲ್ಲರಿಗೂ ಅನುದಾನ ನೀಡುವ ಮೂಲಕ ಅಸಮಾಧಾನ ಶಮನ ಮಾಡಲಾಗಿದೆ.ಬೆಲೆ ಏರಿಕೆ ಆರೋಪ-ಪ್ರತ್ಯಾರೋಪ:ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವು ಇಂಧನ, ಮೋಟಾರು ವಾಹನ ನೋಂದಣಿ ಮತ್ತು ಮದ್ಯ ಸೇರಿ ಹಲವಾರು ಅಗತ್ಯ ವಸ್ತುಗಳ ತೆರಿಗೆಗಳು ಮತ್ತು ಬೆಲೆ ಹೆಚ್ಚಿಸುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ-ಜೆಡಿಎಸ್ ಆರೋಪಿಸುತ್ತಿವೆ. ಆದರೆ, ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ, ರಾಜ್ಯಕ್ಕೆ ಕೇಂದ್ರವು ಸರಿಯಾಗಿ ತೆರಿಗೆ ಪಾಲು ನೀಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ಕಡಿಮೆ ಮಾಡುತ್ತಿದೆ. ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗದ ಕಾರಣ, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್‌ ವಾದಿಸುತ್ತಿದೆ.ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ:ಸರ್ಕಾರದ ಅವಧಿ ಶುರುವಾದ ದಿನದಿಂದಲೂ ಅಧಿಕಾರ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಡಿ.ಕೆ. ಶಿವಕುಮಾರ್ ಬಣ ವಾದಿಸುತ್ತಿದ್ದರೆ ಅಂತಹ ಒಪ್ಪಂದವೇ ಆಗಿಲ್ಲ ಎಂದು ಸಿದ್ದರಾಮಯ್ಯ ಬಣ ಅಲ್ಲಗೆಳೆಯುತ್ತಿದೆ. ಇದೀಗ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್‌ ಮಂಡಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಹೈಕಮಾಂಡ್‌ ಒಪ್ಪಿದರೆ ಐದೂ ವರ್ಷ ನಾನೇ ಮುಖ್ಯಮಂತ್ರಿ ಎಂದಿದ್ದಾರೆ.ಮತ್ತೊಂದೆಡೆ ಡಿ.ಕೆ.ಶಿವಕುಮಾರ್‌ ಅಧಿಕಾರ ಸಿಗುವ ವಿಶ್ವಾಸದೊಂದಿಗೆ ಮುಂದುವರೆದಿದ್ದಾರೆ. ಪ್ರಯತ್ನ ಫಲಿಸದಿದ್ದರೂ ಪ್ರಾರ್ಥನೆ ಫಲಿಸುತ್ತದೆ. ಕಷ್ಟಪಟ್ಟವರಿಗೆ ಪ್ರತಿಫಲ ಇದ್ದೇ ಇರುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಧಿಕಾರ ಹಸ್ತಾಂತರ ಬಗ್ಗೆ ಗೊಂದಲ ಮೂಡಿದೆ, ಆದರ ನಡುವೆಯೇ ಸರ್ಕಾರ ಎರಡೂವರೆ ವರ್ಷ ಎಂಬ ಮಧ್ಯಂತರ ಪೂರ್ಣಗೊಳಿಸಿದೆ.