ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಚರ್ಚೆ ಜೋರಾಗಿದ್ದು, ಸಚಿವ ಸ್ಥಾನ ಬಯಸಿ ದೆಹಲಿಗೆ ತೆರಳಿರುವ ಕಾಂಗ್ರೆಸ್‌ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಮಂಡಿಸಿದ್ದಾರೆ.

ನವದೆಹಲಿ : ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಚರ್ಚೆ ಜೋರಾಗಿದ್ದು, ಸಚಿವ ಸ್ಥಾನ ಬಯಸಿ ದೆಹಲಿಗೆ ತೆರಳಿರುವ ಕಾಂಗ್ರೆಸ್‌ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಮಂಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ರಾಜಾಜಿಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಸೋಮವಾರ 23 ಶಾಸಕರ ನಿಯೋಗ ತೆರಳಿದ್ದು, ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದಾರೆ.

ಇದೇ ವೇಳೆ, ‘ಕರ್ನಾಟಕದಲ್ಲಿ ಸಂಪುಟ ಪುನರ್ ರಚನೆ ಮಾಡುವಂತೆ ಆಗ್ರಹಿಸಿದ್ದು, ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ಶಾಸಕ ಅಶೋಕ್‌ ಪಟ್ಟಣ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಾರಾಯಣಸ್ವಾಮಿ, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟದ್ದು, ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇರಬೇಕಾ? ಡಿ.ಕೆ.ಶಿವಕುಮಾರ್‌ ಅವರನ್ನು ಮಾಡಬೇಕಾ? ಅಥವಾ ದಲಿತ ಮುಖ್ಯಮಂತ್ರಿ ಮಾಡಬೇಕಾ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ಸಂಪುಟ ಪುನರ್ ರಚನೆ ಮಾಡುವಂತೆ ಒತ್ತಾಯಿಸಲು ದೆಹಲಿಗೆ ಬಂದಿದ್ದೇವೆ ಅಷ್ಟೇ’ ಎಂದರು.

‘ಹಿರಿಯ ಶಾಸಕರಿಗೆ ಎರಡೂವರೆ ವರ್ಷದ ಬಳಿಕ ಮಂತ್ರಿ ಮಾಡುತ್ತೇವೆ ಅಂದಿದ್ದರು. ಹಾಗಾಗಿ ಕೇಳುತ್ತಿದ್ದೇವೆ. ಸದ್ಯ ಹಲವು ಸಚಿವರು‌ ನಿಷ್ಕ್ರಿಯರಾಗಿದ್ದು, ಸಿಎಂ ಹಾಗೂ ಡಿಸಿಎಂ ಅವರಿಗೆ, ಅವರು ಆಡಳಿತದಲ್ಲಿ ಸಾಥ್‌ ಕೊಟ್ಟಿಲ್ಲ. ಸಿಎಲ್‌ಪಿಯಲ್ಲೂ ಹಲವು ಸಚಿವರ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಾವು ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ. ಸಿಎಂ, ಡಿಸಿಎಂ ಗಮನಕ್ಕೆ ತಂದು ದೆಹಲಿಗೆ ಬಂದಿದ್ದೇವೆ’ ಎಂದು ತಿಳಿಸಿದರು.

ಶಾಸಕ ಕೃಷ್ಣಮೂರ್ತಿ ಮಾತನಾಡಿ, ‘ಸಂಪುಟ ಪುನರ್ ರಚನೆ ಮಾಡಿ ಅನ್ನುವುದಷ್ಟೇ ನಮ್ಮ ಬೇಡಿಕೆ. ಹೊಸ ಶಾಸಕರು ಸಚಿವಸ್ಥಾನ ಕೇಳೋದು ತಪ್ಪಲ್ಲ. ಯಾರಿಗೆ ಕೊಡಬೇಕು ಅನ್ನೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇಲ್ಲಿಗೆ ಬಂದ ಶಾಸಕರಲ್ಲಿ ಯಾರಿಗೆ ಬೇಕಾದರೂ ಅವಕಾಶ ಕೊಡಿ ಎನ್ನುವುದು ನಮ್ಮ ಆಗ್ರಹ’ ಎಂದು ತಿಳಿಸಿದರು.

ಇನ್ನೂ 3 ದಿನ ಇರುತ್ತೇವೆ:

ಶಾಸಕ ಅಶೋಕ್ ಪಟ್ಟಣ್ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ 3 ವರ್ಷ ಆಗುತ್ತದೆ. ಅಷ್ಟರೊಳಗೆ ಸಂಪುಟ ವಿಸ್ತರಣೆ ಆಗುವ ಭರವಸೆ ಇದೆ. ನಾವು ಇನ್ನು 3 ದಿನ ಇಲ್ಲೇ ಇರುತ್ತೇವೆ. ಏ.16 ಮತ್ತು 17 ರಂದು ಕೆ.ಸಿ.ವೇಣುಗೋಪಾಲ ಮತ್ತು ಸುರ್ಜೇವಾಲ ಅವರನ್ನು ಭೇಟಿಯಾಗಲಿದ್ದೇವೆ. ಎಲ್ಲರ ಜೊತೆ ಮಾತಾಡಿಕೊಂಡು. ಮನವಿ ಕೊಟ್ಟ ಬಳಿಕವೇ ರಾಜ್ಯಕ್ಕೆ ಹೋಗುತ್ತೇವೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ವಾರ್ನಿಂಗ್ ಕುರಿತು ಪ್ರತಿಕ್ರಿಯಿಸಿ, ‘ಅವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದು, ಅವರು ಎಚ್ಚರಿಕೆ ಕೊಡಬಹುದು. ಆದರೆ, ನಾವು ಪಕ್ಷದ ವಿರುದ್ಧ ಕೆಲಸ ಮಾಡುತ್ತಿಲ್ಲ’ ಎಂದರು.

ರಾಹುಲ್‌ ಗಾಂಧಿ ದೆಹಲಿಯಲ್ಲಿಲ್ಲ

ನಗರಕ್ಕೆ ಎರಡ್ಮೂರು ದಿನದ ಹಿಂದೆ ಬಂದಿರುವ ಕರ್ನಾಟಕದ ಕಾಂಗ್ರೆಸ್‌ ಶಾಸಕರು ಸೋಮವಾರ ಹೈಕಮಾಂಡ್ ಭೇಟಿಯಾಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಲೋಕಸಭೆ ವಿಪಕ್ಷ ನಾಯಕ, ಪಕ್ಷದ ವರಿಷ್ಠ ರಾಹುಲ್ ಗಾಂಧಿ ಪ್ರಚಾರಕ್ಕೆ ತೆರಳಿದ್ದು, ಭೇಟಿ ಸಾಧ್ಯವಾಗಿಲ್ಲ. ಇನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಕೇರಳಕ್ಕೆ ಹೋಗಿದ್ದು, ಅವರೂ ಸೋಮವಾರ ರಾತ್ರಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಇನ್ನು ಕೆಲದಿನ ದೆಹಲಿಯಲ್ಲಿಯೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದೆಹಲಿಯಲ್ಲಿರುವ ಶಾಸಕರ ಪಟ್ಟಿ

ಅಶೋಕ ಪಟ್ಟಣ, ವೈ.ವಿ.ಪಾಟೀಲ್, ಜಿ.ಎಸ್.ಪಾಟೀಲ್, ಬಸವರಾಜ್ ಶಿವಣ್ಣವರ, ಆನೇಕಲ್ ಶಿವಣ್ಣ, ಸಿ.ಪುಟ್ಟರಂಗ ಶೆಟ್ಟಿ, ಹಂಪನಗೌಡ ಬಾದರ್ಲಿ, ಡಿ.ಜಿ.ಶಾಂತನಗೌಡ, ಜೆ.ಟಿ.ಪಾಟೀಲ್, ಶಿವಲಿಂಗೇಗೌಡ, ಎ.ಆರ್.ಕೃಷ್ಣಮೂರ್ತಿ, ಯಶವಂತರಾಯಗೌಡ ಪಾಟೀಲ, ಕೆ.ಷಡಾಕ್ಷರಿ, ಟಿ.ಬಿ.ಜಯಚಂದ್ರ, ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್‌.

ಶಾಸಕರ ಬೇಡಿಕೆಗಳು ಏನು?

- ಹಿರಿಯ ಶಾಸಕರಿಗೆ ಸಚಿವ ಸ್ಥಾನಕ್ಕಾಗಿ ಬೇಡಿಕೆ

- ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು

- ನಮ್ಮದು ಕೇವಲ ಸಚಿವ ಸ್ಥಾನಕ್ಕಾಗಿಯಷ್ಟೇ ಆಗ್ರಹ

- ನಾವು ಇನ್ನು 3 ದಿನ ಇಲ್ಲೇ ದೆಹಲಿಯಲ್ಲೇ ಇರುತ್ತೇವೆ

- ಏ.16, 17ಕ್ಕೆ ವೇಣು, ಸುರ್ಜೇವಾಲ ಜೊತೆ ಭೇಟಿ

- ಅವರಿಗೆ ಮನವಿ ಕೊಟ್ಟ ಬಳಿಕವೇ ರಾಜ್ಯಕ್ಕೆ ವಾಪಸ್‌

- ದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕರಿಂದ ಸ್ಪಷ್ಟನೆ