ಸಾರಾಂಶ
ರಾಜ್ಯದಲ್ಲಿ ಅಧಿಕಾರದಲ್ಲಿರುವುದು 25 ಪರ್ಸೆಂಟ್ ಸರ್ಕಾರ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
ಉಡುಪಿ: ರಾಜ್ಯದಲ್ಲಿ ಅಧಿಕಾರದಲ್ಲಿರುವುದು 25 ಪರ್ಸೆಂಟ್ ಸರ್ಕಾರ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
]ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಹಣ ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದ ದಲಿತರ ಅಭಿವೃದ್ಧಿಗೆ ವಿವಿಧ ನಿಗಮಗಳಲ್ಲಿ ತೆಗೆದಿರಿಸಲಾಗಿದ್ದ ಅನುದಾನದಲ್ಲಿ ಶೇ.25ರಷ್ಟು ಮಾತ್ರ ಬಳಕೆ ಮಾಡಿದೆ. ಆದ್ದರಿಂದ ಇದು 25 ಪರ್ಸೆಂಟ್ ಸರ್ಕಾರ ಎಂದರು.ಉಳಿದ ಶೇ.75 ಅನುದಾನವನ್ನು ತನ್ನ ಗ್ಯಾರಂಟಿ ಯೋಜನೆಗೆ ಬಳಸಿ, ದಲಿತರಿಗೆ, ಹಿಂದುಳಿದವರಿಗೆ ಮೋಸ ಮಾಡಿದ್ದು, ಇದು ದಲಿತ ವಿರೋಧಿ ಸರ್ಕಾರ ಎಂದರು.
ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿಯೂ ದಲಿತರಿಗಾಗಿ ಶೇ.97 ಅನುದಾನ ಸದ್ಬಳಕೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ 2023ರಲ್ಲಿ ದಲಿತರ ಮೀಸಲು ಅನುದಾನದಲ್ಲಿ ₹11,000 ಕೋಟಿ ಮತ್ತು 2024ರಲ್ಲಿ ₹14,000 ಕೋಟಿ ಗ್ಯಾರಂಟಿಗೆ ಬಳಸಿದೆ. ಯಾಕೆಂದರೆ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ವ್ಯಂಗ್ಯವಾಡಿದರು.