ದಲಿತ ಸಿಎಂ ಪರ 3 ಸಚಿವರ ಬ್ಯಾಟಿಂಗ್‌!

| Published : Mar 08 2024, 01:45 AM IST / Updated: Mar 08 2024, 08:08 AM IST

Congress

ಸಾರಾಂಶ

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ದಲಿತ ಮುಖ್ಯಮಂತ್ರಿ ಕುರಿತ ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಅವರ ಬೇಡಿಕೆಗೆ ಇದೀಗ ಮೂವರು ಸಚಿವರು ದನಿಗೂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ದಲಿತ ಮುಖ್ಯಮಂತ್ರಿ ಕುರಿತ ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಅವರ ಬೇಡಿಕೆಗೆ ಇದೀಗ ಮೂವರು ಸಚಿವರು ದನಿಗೂಡಿಸಿದ್ದಾರೆ.

ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕೆಂದು ಕೇಳುವುದರಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯ ಬದಲಾವಣೆಯಾದರೆ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು.

ದಲಿತ ಮುಖ್ಯಮಂತ್ರಿ ವಿಚಾರವಾಗಿ ಹೈಕಮಾಂಡ್‌ ಮೇಲೆ ಪ್ರಭಾವ ಬೀರುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಸಚಿವರಾದ ಸತೀಶ್‌ ಜಾರಕಿಹೊಳಿ, ಮಧು ಬಂಗಾರಪ್ಪ ಮತ್ತು ರಾಜಣ್ಣ ಗುರುವಾರ ಹೇಳಿದ್ದಾರೆ.

ಚುನಾವಣೆ ಬಳಿಕ ಧ್ವನಿ ಎತ್ತುತ್ತೇವೆ: ದಲಿತ ಮುಖ್ಯಮಂತ್ರಿ ಕುರಿತಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ಸಮರ್ಥಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಈ ಕೂಗು ಮೊದಲಿನಿಂದಲೂ ಇದೆ. ಇದರಲ್ಲಿ ಹೊಸದೇನೂ ಇಲ್ಲ. 

ಮಲ್ಲಿಕಾರ್ಜುನ ಖರ್ಗೆ ಕಾಲದಿಂದಲೂ ನಾವು (ದಲಿತರು) 99ಕ್ಕೆ ಔಟ್ ಆಗುತ್ತಿದ್ದೇವೆ. ಲೋಕಸಭೆ ಚುನಾವಣೆ ನಂತರ ದಲಿತ ಮುಖ್ಯಮಂತ್ರಿ ಬಗ್ಗೆ ಧ್ವನಿ ಎತ್ತುತ್ತೇವೆ. ಈಗ ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಆದ್ಯತೆ ನೀಡುತ್ತೇವೆ ಎಂದರು.

20 ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇತ್ತು. ಆದರೆ, ಅವರಿಬ್ಬರಿಗೂ ಆ ಭಾಗ್ಯ ಸಿಗಲಿಲ್ಲ. 

ದಲಿತರು ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ನಮ್ಮ ಕಡೆ ಸೈನಿಕರು ಜಾಸ್ತಿ ಇದ್ದಾರೆ. ಆದರೆ ಕ್ಯಾಪ್ಟನ್‌ ಇಲ್ಲ. ನಾವು ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್‌ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರೂ ದಲಿತ ಮುಖ್ಯಮಂತ್ರಿ ಪರ ಬ್ಯಾಟ್‌ ಬೀಸಿದ್ದಾರೆ. ಜತೆಗೆ ದಲಿತ ಮುಖ್ಯಮಂತ್ರಿಯಾಗಿ ಗೃಹ ಸಚಿವ ಪರಮೇಶ್ವರ್ ಅವರ ಹೆಸರನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. 

ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಿರಬೇಕು ಎಂಬುದು ಬಹುಪಾಲು ಶಾಸಕರ ಅಭಿಪ್ರಾಯ ಎಂದಿರುವ ಅವರು, ಒಂದು ವೇಳೆ ಬದಲಾವಣೆ ಮಾಡುವುದೇ ಆದರೆ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು, ಗೃಹ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದು ತಿಳಿಸಿದರು.

ದಲಿತ ಮುಖ್ಯಮಂತ್ರಿ ನಮ್ಮ ಹಕ್ಕು. ಈಗಿನಿಂದಲೇ ದಲಿತ ಮುಖ್ಯಮಂತ್ರಿಗಾಗಿ ಕೂಗು ಹಾಕಿದರೆ ಯಾವತ್ತೋ ಒಂದು ದಿನ ಅದು ಈಡೇರುತ್ತದೆ. ಡಿ.ಕೆ.ಶಿವಕುಮಾರ್‌ ಅವರ ಕೇಸ್ ವಜಾ ಆದ ತಕ್ಷಣ ನಾವು ಈ ಬೇಡಿಕೆ ಮುಂದಿಡುತ್ತಿದ್ದೇವೆ ಅನ್ನುವುದೆಲ್ಲ ತಪ್ಪು. ಈ ಹಿಂದೆಯೂ ಹಲವು ಬಾರಿ ದಲಿತ ಸಿಎಂ ಕೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಮಧ್ಯೆ, ದಲಿತರು ಮುಖ್ಯಮಂತ್ರಿ ಆಗಬೇಕು ಎಂದು ಕೇಳುವ ಹಕ್ಕು ಸಚಿವ ಮಹದೇವಪ್ಪ ಅವರಿಗೆ ಇದೆ. ಆದರೆ, ಬಹಿರಂಗವಾಗಿ ಈ ಬೇಡಿಕೆ ಇಡುವ ಬದಲು ಪಕ್ಷದ ವೇದಿಕೆಯಲ್ಲಿ ಈ ಕೂಗು ಬರಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದ್ದಾರೆ.

ದಲಿತ ಸಿಎಂ ಚರ್ಚೆ ಈಗ ಅಪ್ರಸ್ತುತ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸುತ್ತಿದೆ. ಹಾಗಾಗಿ, ಈಗ ದಲಿತ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದು ಅಷ್ಟೊಂದು ಪ್ರಸ್ತುತವಲ್ಲ.-ಡಾ.ಜಿ.ಪರಮೇಶ್ವರ್, ಗೃಹ ಸಚಿವ

ಪರಮೇಶ್ವರ್‌ ಸಿಎಂ ಆಗಲಿ: ಈಗಿನಿಂದಲೇ ದಲಿತ ಮುಖ್ಯಮಂತ್ರಿಗಾಗಿ ಕೂಗು ಹಾಕಿದರೆ ಯಾವತ್ತೋ ಒಂದು ದಿನ ಅದು ಈಡೇರುತ್ತದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವುದೇ ಆದರೆ ಡಾ.ಜಿ.ಪರಮೇಶ್ವರ್‌ ಸಿಎಂ ಆಗಲಿ. - ಕೆ.ಎನ್‌.ರಾಜಣ್ಣ ಸಹಕಾರ ಸಚಿವ

ಚುನಾವಣೆ ಬಳಿಕ ಧ್ವನಿ ಎತ್ತುತ್ತೇವೆ: ಮಲ್ಲಿಕಾರ್ಜುನ ಖರ್ಗೆ ಕಾಲದಿಂದಲೂ ನಾವು (ದಲಿತರು) 99ಕ್ಕೆ ಔಟ್ ಆಗುತ್ತಿದ್ದೇವೆ. ಲೋಕಸಭೆ ಚುನಾವಣೆ ನಂತರ ದಲಿತ ಮುಖ್ಯಮಂತ್ರಿ ಬಗ್ಗೆ ಧ್ವನಿ ಎತ್ತುತ್ತೇವೆ. - ಸತೀಶ್‌ ಜಾರಕಿಹೊಳಿ ಲೋಕೋಪಯೋಗಿ ಸಚಿವ

ಪಕ್ಷದ ವೇದಿಕೇಲಿ ಈ ಬೇಡಿಕೆ ಇಡಲಿ: ದಲಿತರು ಮುಖ್ಯಮಂತ್ರಿ ಆಗಬೇಕು ಎಂದು ಕೇಳುವ ಹಕ್ಕು ಸಚಿವ ಮಹದೇವಪ್ಪ ಅವರಿಗೆ ಇದೆ. ಪಕ್ಷದ ವೇದಿಕೆಯಲ್ಲಿ ಈ ಕೂಗು ಬರಲಿ. ಬಹಿರಂಗವಾಗಿ ಬೇಡ. - ಮಧು ಬಂಗಾರಪ್ಪ ಶಿಕ್ಷಣ ಸಚಿವ