ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ ಏಕವಚನ ಪ್ರಯೋಗಕ್ಕೆ ಐವರು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಗಡೆ ಅಂಥವರು ಸಮಾಜದ ಆರೋಗ್ಯಕ್ಕೆ ಹಾನಿಕಾರಕ, ಹಿಂದು ಸಂಸ್ಕೃತಿಗೆ ಕಳಂಕ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಹೆಗಡೆ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ಕಿಡಿಕಾರಿದರೆ.
ಅನಂತ ಹೆಗಡೆ ಕೆಟ್ಟ ಹಾವು ಎಂದು ಸಚಿವ ಮಧು ಬಂಗಾರಪ್ಪ ಜರಿದಿದ್ದಾರೆ. ಅನಂತಕುಮಾರ ಹೆಗಡೆಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಸಚಿವ ಡಿ.ಸುಧಾಕರ್ ಟೀಕಿಸಿದರೆ, ನಾಲ್ಕು ವರ್ಷ ಅನಂತ ಕುಮಾರ್ ಹೆಗಡೆ ಯಾವ ಮೂಲೆಯಲ್ಲಿದ್ದ ಎಂದು ಸಚಿವ ಶಿವರಾಜ ತಂಗಡಗಿ ಏಕವಚನದಲ್ಲಿಯೇ ಪ್ರಶ್ನಿಸಿದ್ದಾರೆ.
ಇದೇ ವೇಳೆ ಸಂಸದರ ಹೇಳಿಕೆ ಖಂಡಿಸಿ ಶಿರಸಿ, ಶಿವಮೊಗ್ಗ, ಕೊಪ್ಪಳ ಸೇರಿ ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದು, ಅವರ ಗಡೀಪಾರಿಗೆ ಆಗ್ರಹಿಸಿದ್ದಾರೆ.
ಕೆಟ್ಟ ಹಾವು - ಮಧು ಬಂಗಾರಪ್ಪ
ಸೊರಬದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹೆಗಡೆ ಕೆಟ್ಟ ಹಾವು ಇದ್ದಂತೆ. ಜನರಿಂದ ಆಯ್ಕೆಯಾದ ನಂತರ ಸದನದಲ್ಲಿ ಕಾಣ ಸಿಗದವರು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಕುರಿತು ಏಕವಚನದಲ್ಲಿ ಮಾತನಾಡುವುದು ನೀಚತನದ ಪರಮಾವಧಿ ಎಂದು ಕಿಡಿಕಾರಿದರು.ಇದೇ ವೇಳೆ, ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ವೆಂಕಟೇಶ್, ಅನಂತ ಕುಮಾರ್ ಹೆಗಡೆಗೆ ಸಂಸ್ಕಾರವೇ ಇಲ್ಲ, ಸಂಸ್ಕಾರ ಇಲ್ಲದ ವ್ಯಕ್ತಿಗೆ ನಾವೇನು ಹೇಳುವುದು?
ಸಂಸ್ಕಾರ ಇದ್ದವರು ಅವರ ರೀತಿ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು. ಸಿಎಂ ವಿರುದ್ಧ ಮಾತನಾಡಿದ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಮಧ್ಯೆ, ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ನಾಲ್ಕು ವರ್ಷ ಹೆಗಡೆ ಯಾವ ಮೂಲೆಯಲ್ಲಿದ್ದ? ದೇಶ, ಮಸೀದಿ, ಮಂದಿರ, ಸಿಎಂ ಬಗ್ಗೆ ಮಾತನಾಡಿದರೆ ದೊಡ್ಡವರಾಗಲ್ಲ. ಸಿಎಂ, ಡಿಸಿಎಂ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದರು.
ಸಚಿವ ಡಿ.ಸುಧಾಕರ್ ಮಾತನಾಡಿ, ಅನಂತ ಕುಮಾರ್ ಹೆಗಡೆಗೆ ಬುದ್ಧಿ ಭ್ರಮಣೆಯಾಗಿದೆ. ಹೀಗಾಗಿ, ಸಿಎಂ ವಿರುದ್ಧ ಏಕವಚನ ಬಳಕೆ ಮಾಡುತ್ತಿದ್ದಾರೆ. ನಾಲ್ಕು ವರ್ಷ ಕ್ಷೇತ್ರದಿಂದ ನಾಪತ್ತೆಯಾಗಿದ್ದರು.
ಈಗ ದಿಢೀರೆಂದು ಬೀದಿಗೆ ಬಂದು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗಿರುವ ಆಡಳಿತಾತ್ಮಕ ಅನುಭವ ಅಪಾರ. ಹೆಗಡೆ ಸಭ್ಯತೆ ಮೈಗೂಡಿಸಿಕೊಳ್ಳಬೇಕು. ಕಾಂಗ್ರೆಸ್ ಸಭ್ಯತೆ ಬಗ್ಗೆ ತಿಳಿಯಲು ಅವರು ಮೊದಲು ಇತಿಹಾಸ ಓದಲಿ ಎಂದು ಸಲಹೆ ನೀಡಿದರು.
ರಾಜ್ಯದ ಹಲವೆಡೆ ಪ್ರತಿಭಟನೆ:
ಈ ಮಧ್ಯೆ, ಅನಂತಕುಮಾರ ಹೆಗಡೆ ವಿರುದ್ಧ ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಕುರಿಗಳನ್ನು ರಸ್ತೆಯ ಮೇಲೆ ಸಾಲಾಗಿ ನಿಲ್ಲಿಸಿ, ಹೆಗಡೆಯವರ ಪ್ರತಿಕೃತಿ ದಹಿಸಿ, ಪ್ರತಿಭಟನೆ ನಡೆಸಲಾಯಿತು.
ಹೊಸಪೇಟೆಯಲ್ಲಿ ಸಿದ್ದು ಅಭಿಮಾನಿಗಳು ಅಣಕು ಶವಯಾತ್ರೆ ನಡೆಸಿ, ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿ, ರಾಜ್ಯದಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿದರು. ಅವರ ಪ್ರತಿಕೃತಿಗೆ ಪೊರಕೆ ಸೇವೆ ನಡೆಸಿ, ಮೊಟ್ಟೆ ಒಡೆದು, ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಅವರ ವಿರುದ್ಧ ಘೋಷಣೆ ಕೂಗಿ, ಹೆಗಡೆಯವರ ಬಂಧನಕ್ಕೆ ಆಗ್ರಹಿಸಿದರು. ಕೊಪ್ಪಳದಲ್ಲಿ ಹೆಗಡೆಯವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ಬಳ್ಳಾರಿಯಲ್ಲಿ ಕನ್ನಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ, ಶಿವಮೊಗ್ಗ, ವಿಜಯನಗರ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.