ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಕೊಡುಗೆ ಏನು? ಅವರು ಏನಾದರೂ ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರಾ? ಬಡವರ ಕಷ್ಟ ಕೇಳಿದ್ದಾರಾ? ಈಗ ಲೋಕಸಭಾ ಚುನಾವಣೆ ಬಂದಿರುವುದರಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ತಾಲೂಕಿನ ನರಸೀಪುರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಸಂಸ್ಕೃತಿ’ ಎಂಬ ಪದವಿದೆ ಎಂಬುದು ಗೊತ್ತಾಯಿತಲ್ಲ ಎಂಬ ಸಂಸದರ ಟೀಕೆಗೆ ಪ್ರತಿಕ್ರಿಯಿಸಿ, ಅನಂತಕುಮಾರ ಹೆಗಡೆ ಅವರು ಇಷ್ಟು ದಿನ ಎಲ್ಲಿದ್ದರು? ಅವರ ಪತ್ತೆಯೇ ಇರಲಿಲ್ಲ. ನಾಪತ್ತೆಯಾಗಿ ಬಿಟ್ಟಿದ್ದರು.
ಅವರನ್ನು ಬಹುಮತದಿಂದ ಆರಿಸಿ ಕಳುಹಿಸಿದ ಕ್ಷೇತ್ರದ ಜನರಿಗೆ ಏನಾದರೂ ಸಹಾಯ ಮಾಡಿದ್ದಾರಾ? ಕ್ಷೇತ್ರಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡಿದ್ದಾರಾ? ಕ್ಷೇತ್ರದ ಬಡವರ ಕಷ್ಟ ಕೇಳಿದ್ದಾರಾ? ಈಗ ಚುನಾವಣೆ ಸಮೀಪಿಸುತ್ತಿದ್ದರಿಂದ ರಾಜಕೀಯವಾಗಿ ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧವೂ ಹರಿಹಾಯ್ದ ಸಿಎಂ, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಅನಂತಕುಮಾರ ಹೆಗಡೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರಿಗೂ ಸಂಸ್ಕೃತಿಯಿಲ್ಲ ಎಂದಾಯಿತು. ಸಂಸ್ಕೃತಿ ಎಂದರೆ ಮನುಷ್ಯತ್ವ. ಮನುಷ್ಯನಿಗೆ ಮನುಷ್ಯತ್ವವೇ ಮುಖ್ಯ ಎಂದು ಪ್ರತಿಪಾದಿಸಿದರು.