ಸಾರಾಂಶ
ಚನ್ನಪಟ್ಟಣ ಉಪ ಚುನಾವಣೆಗೆ 50 ಕೋಟಿ ರು. ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಕಮ್ ಜೆಡಿಎಸ್ ಉಪಾಧ್ಯಕ್ಷನಿಗೆ ಮುಂಬರುವ ಚನ್ನಪಟ್ಟಣ ಉಪ ಚುನಾವಣೆಗೆ 50 ಕೋಟಿ ರು. ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದಾಸರಹಳ್ಳಿ ನಿವಾಸಿ ವಿಜಯ್ ತಾತಾ ದೂರು ನೀಡಿದ್ದು, ಅದರನ್ವಯ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ವಿರುದ್ಧ ಜೀವ ಬೆದರಿಕೆ ಮತ್ತು ಸುಲಿಗೆ ಯತ್ನ ಆರೋಪದಡಿ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಮಧ್ಯೆ ನಡೆದ ‘ಹಂದಿ-ಜಂಗೀ ಕುಸ್ತಿ’ಯಲ್ಲಿ ಉದ್ಯಮಿ ವಿಜಯ್ ತಾತಾ ಹೆಸರು ಪ್ರಸ್ತಾಪವಾಗಿತ್ತು. ರಿಯಲ್ ಎಸ್ಟೇಟ್ ದಂಧೆಯಲ್ಲಿ ವಿಜಯ್ ತಾತಾ ಮೂಲಕ ಚಂದ್ರಶೇಖರ್ ತೊಡಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈಗ ಕುಮಾರಸ್ವಾಮಿ ವಿರುದ್ಧವೇ 50 ಕೋಟಿ ರು. ಸುಲಿಗೆ ಆರೋಪ ಬಂದಿದೆ.
ದೂರಿನ ವಿವರ ಹೀಗಿದೆ:
ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ, ದಾಸರಹಳ್ಳಿಯಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ರಿಯಲ್ ಎಸ್ಟೇಟ್ ಜತೆ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಅವರು, 2018ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಆ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ತಮ್ಮನ್ನು ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಮನೆಗೆ ಕರೆದು ಪಕ್ಷದ ಹೊಣೆಗಾರಿಕೆಯನ್ನು ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನೀಡಿದ್ದರು ಎಂದು ವಿಜಯ್ ತಾತಾ ದೂರಿನಲ್ಲಿ ಹೇಳಿದ್ದಾರೆ.
2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹುರಿಯಾಳು ಹಾಗೂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಕೂಡ ನಡೆಸಿದ್ದೆ. ಪಕ್ಷದ ಸಂಘಟನೆಯಲ್ಲಿ ತಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಇದಕ್ಕಾಗಿ ವೈಯಕ್ತಿಕವಾಗಿ ಕೋಟ್ಯಂತರ ರು. ಹಣವನ್ನು ನಾನು ವ್ಯಯಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನ ಕೆಲಸ ನೋಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಅಭಿನಂದಿಸಿದ್ದರು ಎಂದು ವಿಜಯ್ ಹೇಳಿದ್ದಾರೆ.
ಆದರೆ ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮದ ಕಡೆ ಹೆಚ್ಚು ತೊಡಗಿಸಿಕೊಂಡ ಪರಿಣಾಮ ಜೆಡಿಎಸ್ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದೆ. ತಿಂಗಳ ಹಿಂದೆ ನನ್ನ ಮನೆಗೆ ಬಂದು ಮತ್ತೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗುವಂತೆ ಮಾಜಿ ಎಎಂಲ್ಸಿ ಹಾಗೂ ಪಕ್ಷದ ಬೆಂಗಳೂರು ಜಿಲ್ಲೆ ಅಧ್ಯಕ್ಷ ರಮೇಶ್‌ಗೌಡ ಮನವಿ ಮಾಡಿದ್ದರು. ಆಗ ಕುಮಾರಸ್ವಾಮಿ ಸಹ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಹೀಗೆ ಆ.24 ರಂದು ರಾತ್ರಿ 10 ಗಂಟೆಗೆ ನನ್ನ ಮನೆಗೆ ಬಂದಿದ್ದ ರಮೇಶ್‌ಗೌಡ ಅವರು ಮುಂಬರುವ ಚನ್ನಪಟ್ಟಣ ಉಪ ಚುನಾವಣೆ ಕುರಿತು ಪ್ರಸ್ತಾಪಿಸಿದ್ದರು. ಚುನಾವಣೆಗೆ ನಿಖಿಲ್‌ಗೆ ಟಿಕೆಟ್ ನೀಡುವುದು ಅಂತಿಮವಾಗಿದ್ದು, ಈ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗುವಂತೆ ನನಗೆ ಅವರು ಕೋರಿದರು.
ಆಗ ಕುಮಾರಸ್ವಾಮಿ ಅವರಿಗೆ ಕರೆ ಮಾಡಿದ ರಮೇಶ್‌ಗೌಡ, ತಾನು ವಿಜಯ್ ತಾತಾ ಅವರ ಮನೆಗೆ ಬಂದಿರುವುದಾಗಿ ಹೇಳಿ ನನಗೆ ಮಾತನಾಡುವಂತೆ ಮೊಬೈಲ್ ಅನ್ನು ನೀಡಿದರು. ಆಗ ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಪ ಚುನಾವಣೆ ವಿಷಯ ಪ್ರಸ್ತಾಪಿಸಿದರು. ನಮಗೆ ಚುನಾವಣೆ ಗೆಲುವು ಅನಿವಾರ್ಯವಾಗಿದೆ. ನೀವು ಚುನಾವಣಾ ಖರ್ಚಿಗೆ 50 ಕೋಟಿ ರು. ಕೊಡಬೇಕು ಎಂದು ಬೇಡಿಕೆ ಇಟ್ಟರು. ನಾನು ಅಷ್ಟು ಹಣ ಎಲ್ಲಿದೆ ಎಂದು ಹೇಳಿದೆ. ಈ ಮಾತಿಗೆ ಕೋಪಗೊಂಡ ಕುಮಾರಸ್ವಾಮಿ ಅವರು, ‘ನಾನು ಹೇಳಿದಂತೆ ನೀವು 50 ಕೋಟಿ ರು. ರೆಡಿ ಮಾಡಿ. ಇಲ್ಲ ನಾನೇನು ಮಾಡುತ್ತೀನೋ ನನಗೆ ಗೊತ್ತಿಲ್ಲ. ನೀವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸಿರುವುದು ಗೊತ್ತಿದೆ. ಹಣ ಕೊಡದೆ ಹೋದರೆ ನೀವು ಬದುಕಲು ಸಾಧ್ಯವಾಗುವುದಿಲ್ಲ’ ಎಂದು ಬೆದರಿಸಿ ಕರೆ ಸ್ಥಗಿತಗೊಳಿಸಿದರು.
ಬಳಿಕ ‘ಕುಮಾರಣ್ಣ ಹೇಳಿದಂತೆ ಹಣ ಸಿದ್ಧ ಮಾಡಿಕೊಳ್ಳಿ. ಹಾಗೆ ನಾನು ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು, ಇದಕ್ಕೆ 5 ಕೋಟಿ ರು. ಕೊಡಿ ಎಂದು ರಮೇಶ್ ತಾಕೀತು ಮಾಡಿದರು. ಇದಾದ ನಂತರ ಸೆ.6 ಮತ್ತು 11ನೇ ರಂದು ಹಣದ ವಿಚಾರವಾಗಿ ನನಗೆ ವಾಟ್ಸಾಪ್ ಸಂದೇಶವನ್ನು ಸಹ ರಮೇಶ್‌ಗೌಡ ಕಳುಹಿಸಿದ್ದರು. ಹಣಕ್ಕಾಗಿ ನನಗೆ ಜೀವ ಬೆದರಿಕೆ ಹಾಕಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿಜಯ್ ತಾತಾ ದೂರಿನಲ್ಲಿ ಆಗ್ರಹಿಸಿದ್ದಾರೆ.