55 ಜನ ಕಾಂಗ್ರೆಸ್‌ ಶಾಸಕರಿಂದ ಸಿಎಂ ಭೇಟಿ, ಅಹವಾಲು ಸಲ್ಲಿಕೆ

| Published : Jul 05 2024, 12:45 AM IST / Updated: Jul 05 2024, 04:35 AM IST

55 ಜನ ಕಾಂಗ್ರೆಸ್‌ ಶಾಸಕರಿಂದ ಸಿಎಂ ಭೇಟಿ, ಅಹವಾಲು ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಗುರುವಾರ ಪಕ್ಷಾತೀತವಾಗಿ ಶಾಸಕರ ಭೇಟಿಗೆ ಅವಕಾಶ ನೀಡಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು. ತನ್ಮೂಲಕ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನೂ ನಡೆಸಿದರು.

 ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಗುರುವಾರ ಪಕ್ಷಾತೀತವಾಗಿ ಶಾಸಕರ ಭೇಟಿಗೆ ಅವಕಾಶ ನೀಡಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು. ತನ್ಮೂಲಕ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನೂ ನಡೆಸಿದರು.

ಶಾಸಕರಿಗೆ ಮುಖ್ಯಮಂತ್ರಿಗಳು ಸುಲಭವಾಗಿ ಸಿಗುತ್ತಿಲ್ಲ. ನಮ್ಮ ಮನವಿ ಆಲಿಸಲು ಪ್ರತ್ಯೇಕ ಸಮಯ ನಿಗದಿಪಡಿಸಬೇಕೆಂಬ ಬೇಡಿಕೆ ಶಾಸಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಪ್ರತೀ ಗುರುವಾರ ಸಂಜೆ 4ರಿಂದ 6ಗಂಟೆವರೆಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಶಾಸಕರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಗುರುವಾರ ಮೊದಲ ಬಾರಿಗೆ ಶಾಸಕರ ಭೇಟಿಗೆ ಅವಕಾಶ ನೀಡಲಾಗಿತ್ತು. ಓರ್ವ ಜೆಡಿಎಸ್‌ ಶಾಸಕ ಹಾಗೂ 55 ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸುವ ಜೊತೆಗೆ ಪ್ರಸಕ್ತ ರಾಜಕೀಯ ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸಿದರು ಎನ್ನಲಾಗಿದೆ.

ಇದೇ ವೇಳೆ ಕೊಪ್ಪಳ ಸಂಸದ ರಾಜಶೇಖರ್‌ ಹಿತ್ನಾಳ್‌ ಕೂಡ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಹೆಚ್ಚುವರಿ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಮನವಿ ಸಲ್ಲಿಸಿದರು.

ಪ್ರಮುಖವಾಗಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬಾಕಿ ಇರುವ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ಹೊಸ ಯೋಜನೆಗಳ ಆರಂಭಕ್ಕೂ ಅನುದಾನ ಒದಗಿಸುವಂತೆ ಕೋರಿದರು. ಅಲ್ಲದೆ, ಈಗಾಗಲೇ ಪೂರ್ಣಗೊಂಡಿರುವ ಯೋಜನೆಗಳ ಉದ್ಘಾಟನೆಗೆ ಆಗಮಿಸಿ ಸಮಯ ನಿಗದಿಪಡಿಸಿಕೊಂಡರು ಎಂದು ತಿಳಿದು ಬಂದಿದೆ.

ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಕಾರಣಕರ್ತರಾದ ಬೆಂಬಲಿಗ ಕಾರ್ಯಕರ್ತರಿಗೆ ನಿಗಮ- ಮಂಡಳಿಗಳ ಸದಸ್ಯ ಸ್ಥಾನಗಳಿಗೆ ನೇಮಕ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಕೆಲವು ಶಾಸಕರು ಮನವಿ ಮಾಡಿದರು. ನಿಗಮ- ಮಂಡಳಿಗಳಲ್ಲಿ ಕಾರ್ಯಕರ್ತರಿಗೂ ಅಧಿಕಾರ ನೀಡುವುದಾಗಿ ಈ ಹಿಂದೆ ಭರವಸೆ ನೀಡಲಾಗಿತ್ತು. ಅದರಂತೆ ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನಗಳಲ್ಲಿ ಪ್ರಮುಖ ಕಾರ್ಯಕರ್ತರು, ಮುಖಂಡರಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಅದೇ ರೀತಿ ಉಳಿದ ಸದಸ್ಯ ಸ್ಥಾನಗಳಿಗೂ ಇತರೆ ಕಾರ್ಯಕರ್ತರನ್ನು ನೇಮಕ ಮಾಡುವುದರಿಂದ ಸರ್ಕಾರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಲು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.

ಪಕ್ಷಾತೀತವಾಗಿ ಶಾಸಕರ ಭೇಟಿಗೆ ಅವಕಾಶ ನೀಡಲಾಗಿತ್ತಾದರೂ ಜೆಡಿಎಸ್ ಶಾಸಕ ಕೃಷ್ಣಪ್ಪ ಅವರನ್ನು ಹೊರತುಪಡಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ನ ಮತ್ಯಾವುದೇ ಶಾಸಕರು ಬಂದಿರಲಿಲ್ಲ. ಉಳಿದ 55 ಮಂದಿ ಕಾಂಗ್ರೆಸ್ ಶಾಸಕರು ಸಿಎಂ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಶಾಸಕರ ಮನವಿಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತಮ್ಮ ಬೇಡಿಕೆ, ಅಹವಾಲುಗಳ ಈಡೇರಿಕೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು ಎಂದು ಕೆಲ ಶಾಸಕರು ತಿಳಿಸಿದರು.