ರಾಮಕೃಷ್ಣ ಮಿಷನ್‌ನ ಕೆಲ ಸಂತರು ಬಿಜೆಪಿ ಪರ : ದೀದಿ

| Published : May 20 2024, 01:31 AM IST / Updated: May 20 2024, 04:50 AM IST

ಸಾರಾಂಶ

ಭಾರತ ಸೇವಾಶ್ರಮ ಸಂಘ ಮತ್ತು ರಾಮಕೃಷ್ಣ ಮಿಷನ್‌ನ ಕೆಲವು ಸನ್ಯಾಸಿಗಳು ಟಿಎಂಸಿ ವಿರುದ್ಧ ನೇರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.

ಕೋಲ್ಕತಾ/ಬೆಹ್ರಾಂಪುರ: ಭಾರತ ಸೇವಾಶ್ರಮ ಸಂಘ ಮತ್ತು ರಾಮಕೃಷ್ಣ ಮಿಷನ್‌ನ ಕೆಲವು ಸನ್ಯಾಸಿಗಳು ಟಿಎಂಸಿ ವಿರುದ್ಧ ನೇರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.

ಹೂಗ್ಲಿಯ ಜಯರಂಬಟಿಯಲ್ಲಿ ನಡೆದ ಟಿಎಂಸಿ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ, ‘ಭಾರತ ಸೇವಾಶ್ರಮ ಸಂಘದ ಸನ್ಯಾಸಿ ಕಾರ್ತಿಕ್ ಮಹಾರಾಜ್ (ಅಥವಾ ಸ್ವಾಮಿ ಪ್ರದೀಪ್ತಾನಂದ) ಅವರು ಯಾವುದೇ ಟಿಎಂಸಿ ಏಜೆಂಟ್‌ಗೆ ಮತಗಟ್ಟೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾರೆ. ದೆಹಲಿ ಬಿಜೆಪಿ ನಾಯಕರ ಸೂಚನೆಯಂತೆ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದರು. 

‘ನಾನು ಭಾರತ್ ಸೇವಾಶ್ರಮ ಸಂಘವನ್ನು ತುಂಬಾ ಗೌರವಿಸುತ್ತಿದ್ದೆ. ಇದು ಬಹಳ ಹಿಂದಿನಿಂದಲೂ ಅದು ಗೌರವಾನ್ವಿತ ಸಂಸ್ಥೆಗಳ ಪಟ್ಟಿಯಲ್ಲಿದೆ. ಆದರೆ ಇಂಥ ವ್ಯಕ್ತಿಯನ್ನು (ಕಾರ್ತಿಕ್‌ ಮಹಾರಾಜ್‌) ನಾನು ಸಂತನೆಂದು ಪರಿಗಣಿಸುವುದಿಲ್ಲ. ಏಕೆಂದರೆ ಅವರು ರಾಜಕೀಯ ಮಾಡುತ್ತ ದೇಶ ಹಾಳು ಮಾಡುತ್ತಿದ್ದಾರೆ’ ಎಂದು ಅವರು ಕಿಡಿಕಾರಿದರು.

‘ರಾಮಕೃಷ್ಣ ಮಿಷನ್‌ಗೆ ಕೂಡ ದೆಹಲಿಯಿಂದ ಸೂಚನೆಗಳು ಬಂದಿವೆ. ಬಿಜೆಪಿಗೆ ಮತ ಹಾಕುವಂತೆ ಭಕ್ತರಿಗೆ ಹೇಳುವಂತೆ ನಿಮ್ಮ ಸನ್ಯಾಸಿಗಳಿಗೆ ಹೇಳಿ ಎಂಬ ಸೂಚನೆಗಳು ಅವರಿಗೆ ಸಿಕ್ಕಿವೆ. ಸನ್ಯಾಸಿಗಳು ಮತ್ತು ಸಂತರು ಈ ಕೆಲಸಗಳನ್ನು ಏಕೆ ಮಾಡಬೇಕು?’ ಎಂದು ಮಮತಾ ಪ್ರಶ್ನಿಸಿದರು.

ಇದೇ ವೇಳೆ, ರಾಮಕೃಷ್ಣ ಮಿಷನ್‌ಗೆ ತಾವು ಮಾಡಿದ ಸಹಾಯ ನೆನೆದ ಮಮತಾ, ‘ಸಿಪಿಎಂ ಸರ್ಕಾರ ಇದ್ದಾಗ ರಾಮಕೃಷ್ಣ ಮಿಷನ್‌ ಆಹಾರ ಪೂರೈಕೆ ಮಾಡುವುದಕ್ಕೆ ತಡೆ ಒಡ್ಡಲಾಗಿತ್ತು. ನಾನು ಅದನ್ನು ವಿರೋಧಿಸಿದೆ. ಇನ್ನು ಇಸ್ಕಾನ್‌ಗೆ 700 ಎಕರೆ ಭೂಮಿ ನೀಡಿದ್ದೇನೆ. ಅಲ್ಲದೆ ಸ್ವಾಮಿ ವಿವೇಕಾನಂದರ ಪೂರ್ವಜರ ಆಸ್ತಿಗಳನ್ನು ಅನ್ಯರು ಲೂಟಿ ಮಾಡದಂತೆ ತಡೆದು ರಾಮಕೃಷ್ಣ ಮಿಷನ್‌ಗೆ ಒಪ್ಪಿಸಿದ್ದೇ ಈ ಹುಡುಗಿ (ಮಮತಾ)’ ಎಂದು ದೀದಿ ನುಡಿದರು.