ಗೆಲ್ಲುವ ಅಭ್ಯರ್ಥಿಗೆ ಮೂರು ಪಕ್ಷಗಳಲ್ಲಿ ಹುಡುಕಾಟ

| Published : Nov 06 2023, 12:47 AM IST

ಗೆಲ್ಲುವ ಅಭ್ಯರ್ಥಿಗೆ ಮೂರು ಪಕ್ಷಗಳಲ್ಲಿ ಹುಡುಕಾಟ
Share this Article
  • FB
  • TW
  • Linkdin
  • Email

ಸಾರಾಂಶ

ಗೆಲ್ಲುವ ಅಭ್ಯರ್ಥಿಗೆ ಮೂರು ಪಕ್ಷಗಳಲ್ಲಿ ಹುಡುಕಾಟಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿಸುಮಲತಾ ಅಂಬರೀಶ್ ಮತ್ತೊಮ್ಮೆ ಸ್ಪರ್ಧೆಗೆ ಉತ್ಸಾಹ

- ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿ

- ಸುಮಲತಾ ಅಂಬರೀಶ್ ಮತ್ತೊಮ್ಮೆ ಸ್ಪರ್ಧೆಗೆ ಉತ್ಸಾಹವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದೊಳಗೆ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಗೊಂಡಿದೆ. ಅಧಿಕಾರ ಬಲ ಬಳಸಿ ಕ್ಷೇತ್ರ ಗೆಲ್ಲುವ ಸಾಹಸಕ್ಕೆ ಕಾಂಗ್ರೆಸ್ ಮುಂದಾಗಿದ್ದರೆ, ಜೆಡಿಎಸ್-ಬಿಜೆಪಿ ಮೈತ್ರಿ ಅಧಿಕೃತ ಘೋಷಣೆಯಾಗಿದ್ದು, ಕ್ಷೇತ್ರ ಉಳಿಸಿಕೊಳ್ಳುವುದಕ್ಕೆ ಎರಡೂ ಪಕ್ಷಗಳು ಪೈಪೋಟಿಗಿಳಿದಿವೆ.

ಹಾಲಿ ಸಂಸದೆ ಸುಮಲತಾ ಅಂಬರೀಶ್ ಲೋಕಸಭೆಯನ್ನು ಮತ್ತೊಮ್ಮೆ ಪ್ರತಿನಿಧಿಸಲು ಉತ್ಸಾಹ ತೋರಿದ್ದಾರೆ. ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಈಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ೨೦೨೪ರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ಅವಕಾಶ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಜೆಡಿಎಸ್ ತನ್ನ ಮಿತ್ರ ಪಕ್ಷ ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಡುವುದೇ ಅಥವಾ ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿಯುವುದನ್ನು ಒಪ್ಪುವುದೇ ಎಂಬ ಕುತೂಹಲ ಕೆರಳಿಸಿದೆ.

ಫೀನಿಕ್ಸ್‌ನಂತೆ ಮೇಲೆದ್ದ ಕೈಪಡೆ:

೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಫೀನಿಕ್ಸ್‌ನಂತೆ ಮೇಲೆದ್ದು ಬಂದದ್ದು ಈಗ ಇತಿಹಾಸ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಿಂದ ಆರಂಭಗೊಂಡ ಕಾಂಗ್ರೆಸ್ ಗೆಲುವಿನ ಓಟ ನಿರಂತರವಾಗಿ ಮುಂದುವರೆದಿದೆ. ಜಿಲ್ಲೆಯ ೭ ಸ್ಥಾನಗಳಲ್ಲಿ ೬ ಸ್ಥಾನಗಳಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಇದೀಗ ೨೦೨೪ರ ಲೋಕಸಭಾ ಚುನಾವಣೆಯಲ್ಲೂ ಗೆಲುವಿನ ಓಟ ಮುಂದುವರೆಸುವುದಕ್ಕೆ ಟೊಂಕ ಕಟ್ಟಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದರೊಂದಿಗೆ ರಾಜಕೀಯ ಪ್ರಾಬಲ್ಯ ಮೆರೆದಿದ್ದ ಕಾಂಗ್ರೆಸ್‌ನ ಒಂದು ಗುಂಪು ಈ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷದ ಶಕ್ತಿಯನ್ನೆಲ್ಲಾ ಪ್ರಯೋಗಿಸುವುದರೊಂದಿಗೆ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದೆ.

ಸಮರ್ಥರಿಗಾಗಿ ಶೋಧ:

ಈಗಾಗಲೇ ಕಾಂಗ್ರೆಸ್ ನಡೆಸಿದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟಿತ್ತು. ಆದರೆ, ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಾರದೊಳಗೆ ೩ರಿಂದ ೫ ಸಂಭಾವ್ಯ ಅಭ್ಯರ್ಥಿ ಹೆಸರನ್ನು ಸೂಚಿಸುವಂತೆ ಆದೇಶಿಸಿರುವುದು ಜಿಲ್ಲೆಯಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಂತೆ ಕಂಡುಬರುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯ ಕೆಲವು ಟಿಕೆಟ್ ಆಕಾಂಕ್ಷಿತರನ್ನೂ ಒಳಗೊಂಡಂತೆ ಮಾಜಿ ಶಾಸಕರು ಮತ್ತು ಮುಖಂಡರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರೂ, ಅಂತಿಮವಾಗಿ ಹೈಕಮಾಂಡ್ ಮಂಡ್ಯ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆದಿದೆ.

ಕಾಂಗ್ರೆಸ್‌ನಿಂದ ಹೊಸ ಪ್ರಯೋಗ ಸಾಧ್ಯತೆ:

೨೦೨೪ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಸವಾಲಾಗಿದೆ. ಸದ್ಯ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರದ ಪ್ರಾಬಲ್ಯವನ್ನು ಹೊಂದಿದೆ. ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದ್ದರಿಂದಲೇ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದಂತೆ ಕಂಡುಬರುತ್ತಿದೆ. ಸದ್ಯ ಚಲಾವಣೆಯಲ್ಲಿರುವ ಕೆಲವು ಅಭ್ಯರ್ಥಿಗಳ ಹೆಸರು ಚುನಾವಣೆಯಲ್ಲಿ ಗೆಲುವಿನ ಭರವಸೆಯನ್ನು ಮೂಡಿಸುತ್ತಿಲ್ಲ. ಆದ್ದರಿಂದ ಹೊಸ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಹೆಚ್ಚಾಗಿವೆ.

ಮತ್ತೊಂದೆಡೆ ಬಿಜೆಪಿ-ಜೆಡಿಎಸ್ ಮೈತ್ರಿಯ ಘೋಷಣೆಯಾಗಿದ್ದು, ಜೆಡಿಎಸ್ ಕಳೆದ ಚುನಾವಣೆಯ ಸೋಲಿನ ಅಪಮಾನದಿಂದ ಹೊರಬರಲು ಬಿಜೆಪಿಯ ಬೆಂಬಲವನ್ನು ಕೋರಿದೆ. ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು ಅವರನ್ನು ಕಣಕ್ಕಿಳಿಸುವ ಸಿದ್ಧತೆಗಳು ನಡೆದಂತೆ ಮೇಲ್ನೋಟಕ್ಕೆ ಕಂಡುಬಂದರೂ, ಆಂತರಿಕವಾಗಿ ನಿಖಿಲ್‌ಕುಮಾರಸ್ವಾಮಿ ಮತ್ತೊಮ್ಮೆ ಸ್ಪರ್ಧಿಸುತ್ತಾರಾ ಎಂಬ ಅನುಮಾನಗಳು ಮೂಡುತ್ತಿವೆ.

ಆಕಾಂಕ್ಷಿತರಲ್ಲಿ ರವಿಕಾಂತೇಗೌಡ ಹೆಸರು:

ಮತ್ತೊಂದು ಕಡೆ ಸಾಹಿತಿ ಬೆಸಗರಹಳ್ಳಿ ರಾಮಣ್ಣ ಪುತ್ರ ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರಿಂದ ರಾಜೀನಾಮೆ ಕೊಡಿಸಿ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದಕ್ಕೆ ಜೆಡಿಎಸ್ ಪ್ರಯತ್ನಗಳನ್ನು ನಡೆಸಿದೆ. ರವಿಕಾಂತೇಗೌಡರು ಜಿಲ್ಲೆಯೊಳಗೆ ಅಪಾರ ಸ್ನೇಹ ಬಳಗವನ್ನು ಹೊಂದಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಒಕ್ಕಲಿಗ ಸಮುದಾಯ ಅವರ ಜೊತೆಗಿರುವುದರಿಂದ ಗೆಲುವು ಸುಲಭವಾಗಬಹುದೆಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಇದೆ. ಈ ವಿಷಯದಲ್ಲಿ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.

ಈ ಹಿಂದೆ ಕಾಂಗ್ರೆಸ್ ಪುಟ್ಟರಾಜು ಅವರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯನ್ನಾಗಿಸುವ ಬಗ್ಗೆ ವದಂತಿಗಳು ಕೇಳಿಬಂದಿದ್ದವು. ಅದಕ್ಕೆ ಪ್ರತಿಯಾಗಿ ಜೆಡಿಎಸ್ ಪುಟ್ಟರಾಜು ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದಂತೆ ಕಂಡುಬಂದಿತ್ತು. ಸದ್ಯಕ್ಕೆ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, ಸಂಸದೆ ಸುಮಲತಾ ಮಾತ್ರ ಮೈತ್ರಿ ಅಭ್ಯರ್ಥಿಯನ್ನಾಗಿ ತಮ್ಮನ್ನೇ ಘೋಷಿಸುವಂತೆ ವರಿಷ್ಠರನ್ನು ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.ಕ್ಷೇತ್ರಕ್ಕೆ ಸೆಣಸಾಟ

ಜೆಡಿಎಸ್ ಮಂಡ್ಯ ಜಿಲ್ಲೆಯೊಳಗೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹವಣಿಸುತ್ತಿದ್ದು, ಲೋಕಸಭೆ ಚುನಾವಣೆಯ ಗೆಲುವು ದಳಪತಿಗಳಿಗೆ ಅನಿವಾರ್ಯವಾಗಿದೆ. ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೆ ಬಿಜೆಪಿ ಹಿಂದೇಟು ಹಾಕುತ್ತಿದೆ. ೨೦೨೩ರ ವಿಧಾನಸಭೆ ಚುನಾವಣೆಗೆ ಮುನ್ನವೇ ಸುಮಲತಾ ಅವರಿಗೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವ ಪ್ರಮಾಣ ಮಾಡಿರುವುದಾಗಿ ಬಿಜೆಪಿ ಹೈಕಮಾಂಡ್ ಹೇಳುತ್ತಿದೆ.

ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದಲೇ ತನ್ನ ಚುನಾವಣಾ ಹೋರಾಟವನ್ನು ನಡೆಸುವುದಾಗಿ ಸ್ಪಷ್ಟಪಡಿಸಿದ್ದು, ಇದು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದು ವೇಳೆ ಬಿಜೆಪಿಗೇ ಮಂಡ್ಯ ಕ್ಷೇತ್ರ ಮೀಸಲಾದರೆ, ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿಸುವುದರಲ್ಲಿ ಅನುಮಾನವಿಲ್ಲ. ಅದೇ ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟುಕೊಟ್ಟರೆ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸುವ ಚಿಂತನೆಯನ್ನು ಜೆಡಿಎಸ್ ನಡೆಸಲಿದೆ.

ಕಳೆದ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಸುನಾಮಿ ಎಬ್ಬಿಸಿದ್ದ ಜೆಡಿಎಸ್, ಈ ಚುನಾವಣೆಯಲ್ಲಿ ಅತ್ಯಂತ ದುರ್ಬಲವಾಗಿ ಕಂಡುಬಂದಿದೆ. ರಾಜ್ಯದಲ್ಲಿ ಕೂಡ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮುವಲ್ಲಿ ವಿಫಲವಾಗಿದ್ದು, ಲೋಕಸಭಾ ಚುನಾವಣೆ ಸವಾಲಾಗಿರುವ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.