ಹನಿಟ್ರ್ಯಾಪ್ ಬಳಿಕ ರಾಜ್ಯದಲ್ಲಿ ಈಗ ಫೋನ್‌ಟ್ಯಾಪ್: ತಮ್ಮದೇ ಸರ್ಕಾರದ ಬಗ್ಗೆ ಕಾಂಗ್ರೆಸ್ ಶಾಸಕರ ದೂರು

| N/A | Published : Mar 25 2025, 07:16 AM IST

Karnataka Chief Minister Siddaramaiah (File Photo/ANI)

ಸಾರಾಂಶ

ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಆರೋಪ ಮತ್ತೊಮ್ಮೆ ಸದ್ದು ಮಾಡಿದ್ದು, ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕದ್ದಾಲಿಕೆ ದೂರು ನೀಡಿದ್ದಾರೆ ಎಂಬ ಗುಲ್ಲೆದ್ದಿದೆ.

ಬೆಂಗಳೂರು : ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಆರೋಪ ಮತ್ತೊಮ್ಮೆ ಸದ್ದು ಮಾಡಿದ್ದು, ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕದ್ದಾಲಿಕೆ ದೂರು ನೀಡಿದ್ದಾರೆ ಎಂಬ ಗುಲ್ಲೆದ್ದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲ ಶಾಸಕರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಷತ್‌ ಸದಸ್ಯರೊಬ್ಬರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಯಾವುದೇ ಶಾಸಕರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಈ ರೀತಿ ಯಾವುದೇ ದೂರು ಮುಖ್ಯಮಂತ್ರಿ ಅವರ ಬಳಿ ಬಂದಿಲ್ಲ ಎಂದು ಸಿಎಂ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಮತ್ತೊಂದೆಡೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿ, ಆಡಳಿತ ಹಾಗೂ ಪ್ರತಿಪಕ್ಷದ ಪ್ರಮುಖ ನಾಯಕರ ದೂರವಾಣಿ ಕದ್ದಾಲಿಕೆ ಶೇ.100ರಷ್ಟು ಸತ್ಯ. ಆಡಳಿತ ಪಕ್ಷದ ಶಾಸಕರೇ ಇದನ್ನು ಹೇಳಿದ್ದಾರೆ. ವಿರೋಧಿಗಳನ್ನು ಬಗ್ಗು ಬಡಿಯಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಇದರಲ್ಲಿ ಅನುಮಾನವೇ ಬೇಡ ಎಂದು ಹೇಳಿದ್ದಾರೆ. ನನ್ನ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗುತ್ತಿದೆ. ಸಚಿವ ಕೆ.ಎನ್‌.ರಾಜಣ್ಣ ಹಾಗೂ ಅವರ ಪುತ್ರ ಎಂಎಲ್‌ ರಾಜೇಂದ್ರ ಅವರ ಫೋನ್ ಕದ್ದಾ ಲಿಕೆಯೂ ಆಗಿದೆ. 2 ವರ್ಷಗಳಿಂದ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಖುದ್ದು ಕುಮಾರಸ್ವಾಮಿ ಅವರೇ ಆರೋಪಿಸಿ ದ್ದರು ಎಂದು ಅಶೋಕ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರವಾಣಿ ಕದ್ದಾಲಿಕೆ ವಿಚಾರ ತೀವ್ರ ಸದ್ದು ಮಾಡುತ್ತಿದೆ.

ಗೃಹ ಸಚಿವರಿಗೆ ದೂರು: ಹನಿಟ್ರ್ಯಾಪ್‌ ಪ್ರಕರಣ ಸಂಬಂಧ ಗೃಹ ಸಚಿವರನ್ನು ಭೇಟಿ ಮಾಡಿ ಲಿಖಿತ ದೂರು ನೀಡುತ್ತೇನೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದನದಲ್ಲಿ ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ಕಾನೂನು ಕ್ರಮದ ಹಿನ್ನೆಲೆ ಗೃಹಮಂತ್ರಿ ಭೇಟಿ ಮಾಡಿ ಲಿಖಿತ ದೂರು ನೀಡುತ್ತೇನೆ ಎಂದು ತಿಳಿಸಿದರು. ಗೃಹ ಸಚಿವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ತನಿಖೆ ಮಾಡಿದರೆ ಸೂಕ್ತ. ಇದರಲ್ಲಿ ಇವರು, ಅವರು ಸೇರಿದ್ದಾರೆ ಅಂತ ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ.

ಯಾರಿದ್ದಾರೆ ಅಂತ ಸತ್ಯ ಹೊರಗೆ ಬರಬೇಕು. ಹೈಕಮಾಂಡ್ ಗೆ ಯಾಕೆ ದೂರು ಕೊಡಬೇಕು ಅಂದರೆ ಯಾರಾದರೂ ಹೈಕಮಾಂಡ್‌ಗೆ ಸಿಡಿ ತೆಗೆದುಕೊಂಡು ಹೋಗಿ ಕೊಟ್ಟರೆ, ರಾಜಣ್ಣ ಮೊದಲೇ ಹೇಳಿದ್ದರು ಅಂತ ಗೊತ್ತಿರಬೇಕಲ್ಲ. ನಾನು ಯಾವ ರೀತಿ ಲೋಪ ಎಸಗಿಲ್ಲ. ನನ್ನ ಮೇಲೆ ಯಾವುದಾದರೂ ಲೋಪ ಇದೆ ಅಂದರೆ ನಂಬಬಾರದು ಎಂದರು. ಎಲ್ಲರ ಮುಂದೆ ಏನು - ಎತ್ತ ಅಂತ ಹೇಳಲು ಬಯಸುವುದಿಲ್ಲ. ಎಲ್ಲೋ ಆಗಿದೆ. ಸತೀಶ್ ಜಾರಕಿಹೊಳಿ ತೀವ್ರವಾಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಯಾವ ರೀತಿ ತೀವ್ರತೆ ಅಂತ ಅವರ ಬಾಯಿಂದಲ್ಲೇ‌ ಕೇಳಿ ಎಂದರು.