ಸಾರಾಂಶ
ಶಿಡ್ಲಘಟ್ಟ : ಬಿಜೆಪಿಯ ಅಜೆಂಡಾ ಏನಿದ್ದರೂ ಸಾಧನೆ ಮತ್ತು ಸುಭದ್ರ ಭಾರತವಾದರೆ ಕಾಂಗ್ರೆಸ್ ನ ಅಜೆಂಡಾ ಕೇವಲ ಅಧಿಕಾರ ದಾಹಕ್ಕಾಗಿ ತನ್ನ ಕುರ್ಚಿಯನ್ನು ಕಾಪಾಡಿ ಕೊಳ್ಳುವುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ನಗರದ ಬಿಜೆಪಿ ಸೇವಾ ಸೌಧದಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ತವರು ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟರೆ ಮಾತ್ರ ತಾವು ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಾಧ್ಯವೆಂದು ಹೇಳಿದ್ದಾರೆ. ಇದು ಕಾಂಗ್ರೆಸ್ ನವರಿಗೆ ರಾಜ್ಯದ ಹಿತಕ್ಕಿಂತ ಕುರ್ಚಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ಅಜೆಂಡಾ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.ಸಚಿವ ಮುನಿಯಪ್ಪ ಮೂಲೆಗುಂಪು
ಕೋಲಾರ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುರಿದ ಮನೆಯಂತಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಮೂಲೆ ಗುಂಪು ಮಾಡಲಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಒಂದು ಕಡೆ ಮಾತನಾಡಿ ಇನ್ನು ಮುಂದೆ ನಾನು ಮತದಾರರನ್ನು ಮತ ಹಾಕಿ ಎಂದು ಕೇಳುವುದಿಲ್ಲ ಎನ್ನುತ್ತಾರೆ.
ಆಂಧ್ರದಿಂದ ಬಂದಿರುವ ಅಭ್ಯರ್ಥಿ ಗೌತಮ್ ಡಿಸಿಎಂ ಮುಂದೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡುವ ದೃಷ್ಟಿಯಿಂದ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರ ಕ್ಕೆ ಮಲ್ಲೇಶ್ ಬಾಬು ಅವರಿಗೆ ಟಿಕೆಟ್ ನೀಡಿದ್ದೇವೆ. ಈ ಭಾಗದಲ್ಲಿ ಸಂಸದ ಮುನಿಸ್ವಾಮಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದಾರೆ.
ಮೋದಿಯವರು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ನಾವು ಮತಯಾಚನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಎನ್‌ಡಿಎ 24 ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಬಿ .ಎನ್. ರವಿ ಕುಮಾರ್, ಅಭ್ಯರ್ಥಿ ಎಂ ಮಲ್ಲೇಶ್ ಬಾಬು, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ವಿಧಾನಸಭಾ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಸಂಸದ ಎಸ್ ಮುನಿಸ್ವಾಮಿ, ಮಾಜಿ ಶಾಸಕ ಎಂ ರಾಜಣ್ಣ, ಆನಂದ್ ಗೌಡ , ರಮೇಶ್ ಬಾಯರಿ, ಸುರೇಂದ್ರ ಗೌಡ ಮತ್ತಿತರರು ಹಾಜರಿದ್ದರು.